Kundapra.com ಕುಂದಾಪ್ರ ಡಾಟ್ ಕಾಂ

ಗೊಂಬೆಯಾಟದ ಸೂತ್ರಧಾರ ಭಾಸ್ಕರ್ ಕೊಗ್ಗ ಕಾಮತ್ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಲೆ – ಕಲಾವಿದರಿಗೆ ಪ್ರೋತ್ಸಾಹ ಸಮಾಜದ ಆದ್ಯ ಕರ್ತವ್ಯವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಇಲ್ಲಿನ ಶಾಸರದ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ 3 ದಿನಗಳ ಸುರಭಿ ಜೈಸಿರಿ ಕಾರ್ಯಕ್ರಮದ ಸಮಾರೋಪದಲ್ಲಿ ಉಪ್ಪಿನಕುದ್ರು ಗೊಂಬೆಯಾಟದ ಸೂತ್ರಧಾರ ಭಾಸ್ಕರ ಕೊಗ್ಗ ಕಾಮತ್ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬಹಳಷ್ಟು ಜಾನಪದ ಕಲೆಗಳು ಇಂದು ಅವಸಾನದಂಚಿನಲ್ಲಿವೆ. ಸಮಾಜ, ಸರಕಾರದ ಪ್ರೋತ್ಸಾಹದ ಕೊರತೆಯಿಂದ ಹಾಗಾಗಿದೆ. ಹೊಸ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಕಾರ್ಯ ನಡೆಯಬೇಕು. ಯಕ್ಷಗಾನ ಗೊಂಬೆಯಾಟದ ಸೊಗಡನ್ನು ವಿಶ್ವದೆಲ್ಲೆಡೆ ಪಸರಿಸಿದ ಕೊಗ್ಗ ಕಾಮತ್ ಹಾದಿಯಲ್ಲಿ ಅವರ ಮಗ ಭಾಸ್ಕರ ಕೊಗ್ಗ ಕಾಮತ್ ಹೆಜ್ಜೆ ಹಾಕಿರುವುದು ಕಲೆಯ ಉಳಿವಿನ ದೃಷ್ಟಿಯಿಂದ ಶ್ಲಾಘನೀಯ ಎಂದರು.

ಪ್ರಶಸ್ತಿ ಸ್ವೀಕರಿಸಿದ ಭಾಸ್ಕರ ಕೊಗ್ಗ ಕಾಮತ್ ಅವರು ಮಾತನಾಡಿ ಜಾನಪದ ಕಲೆಗಳು ಉಳಿದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಜನರ ಸಹಕಾರದಿಂದ ಮಾತ್ರ ಕಲೆ ಉಳಿಯಲು ಸಾಧ್ಯ. ಮುಂದಿನ ಪೀಳಿಗೆಗೆ ವಿಸ್ತರಿಸಲು ಕಲೆ, ಶಿಕ್ಷಣದ ಭಾಗವಾಗಬೇಕು ಎಂದರು.

ನಿವೃತ್ತ ಬ್ಯಾಂಕ್ ಅಧಿಕಾರಿ ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಉದ್ಯಮಿ ಎ. ಸತೀಶ್, ನಿವೃತ್ತ ಶಿಕ್ಷಕಿ ಶಾರದಾ ಕೆ. ನಾರಾಯಣ, ಶಿರೂರು ಜೆಸಿಐ ಪೂರ್ವಾಧ್ಯಕ್ಷೆ ಜಾನ್ವಿ ಪ್ರಸಾದ್ ಪ್ರಭು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಭಿನಂದನಾ ನುಡಿಗಳನ್ನಾಡಿದರು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಗಿರೀಶ್ ಮೇಸ್ತ ವಂದಿಸಿದರು. ಸುರಭಿ ಸಂಸ್ಥೆ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆನಂದ ಮದ್ದೋಡಿ ನಿರೂಪಿಸಿದರು.

ಬಳಿಕ ಸುರಭಿ ಭರತ ನಾಟ್ಯ ವಿದ್ಯಾರ್ಥಿಗಳಿಂದ ನೃತ್ಯಾಂಜಲಿ, ನಾಟ್ಯ ವೈವಿಧ್ಯ ಹಾಗೂ ನೃತ್ಯ ರೂಪಕ ಪಾಶುಪತಾಸ್ತ್ರ, ಸುರಭಿ ರಂಗ ಕಲಾವಿದರಿಂದ ರಂಗ ಗೀತೆಗಳ ಪ್ರಸ್ತುತಿ ನಡೆಯಿತು.

Exit mobile version