ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಷಾ ಕ್ಷೇತ್ರಗಳಂತೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚುತ್ತಿದೆ. ಈ ಭಾರಿ ಯಾರಿಗೆ ಪಕ್ಷ ಟಿಕೆಟ್ ನೀಡಲಿದೆ. ಯಾವ ಸಮುದಾಯಕ್ಕೆ ಅವಕಾಶ ದೊರೆಯಲಿದೆ ಎಂಬ ಕುತೂಹಲ ಸದ್ಯ ಮತದಾರರಲಿಲ್ಲದೆ.
ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ:
ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ಭಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಕಳೆದ 5 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಟಿಕೆಟ್ ನಿರಾಕರಿಸಲು ಕಾರಣಗಳಿಲ್ಲ. ಹಾಗಾಗಿಯೇ ಮತ್ತೆ ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ ಎಂದು ಶಾಸಕರು ಹೇಳಿಕೊಂಡಿದ್ದಾರೆ. ಮತ್ತೆ ಟಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನವನ್ನೂ ನಡೆಸುತ್ತಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಪ್ರಣಯಕುಮಾರ್ ಶೆಟ್ಟಿ:
ಬೈಂದೂರು ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯಕುಮಾರ್ ಶೆಟ್ಟಿ ಅವರು ಈ ಭಾರಿ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷ ಸಂಘಟನೆಯ ಕಲೆ ಹಾಗೂ ಆರ್.ಎಸ್.ಎಸ್ ಬೆಂಬಲ ಹೊಂದಿರುವ ಪ್ರಣಯ ಶೆಟ್ಟಿ ಅವರು ಕಳೆದೊಂದು ವರ್ಷದಿಂದ ಮತ್ತೆ ರಾಜಕೀಯವಾಗಿ ಸಕ್ರೀಯರಾಗಿದ್ದಾರೆ.
ಜಯಾನಂದ ಹೋಬಳಿದಾರ್:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ಜಯಾನಂದ ಹೋಬಳಿದಾರ್ ಅವರ ಹೆಸರು ಕೂಡ ಬೈಂದೂರು ಬಿಜೆಪಿ ಎಂ.ಎಲ್.ಎ ಟಿಕೆಟ್ ಪಟ್ಟಿಯಲ್ಲಿ ಕೇಳಿಬಂದಿದೆ. ಉತ್ತಮ ಸಂಘಟಕರಾಗಿರುವ ಜಯಾನಂದ ಹೋಬಳಿದಾರ್ ಅವರು ಬಿಜೆಪಿಯಲ್ಲಿ ಆರಂಭದಿಂದಲೂ ಗುರುತಿಸಿಕೊಂಡವರು. ಆರ್.ಎಸ್.ಎಸ್ ಪ್ರಮುಖರ ಜೊತೆಗೆ ನಿಟಕ ಸಂಪರ್ಕ ಹೊಂದಿರುವ ಹೋಬಳಿದಾರ್ ಅವರು ಬೈಂದೂರು ಭಾಗದಲ್ಲಿ ಸಂಘದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಶ್ರಮಿಸಿದ್ದಾರೆ. ರಾಷ್ಟಮಟ್ಟದ ಕ್ರೀಡಾಕೂಟಗಳ ಆಯೋಜನೆ, ಅಗತ್ಯವುಳ್ಳವರಿಗೆ ಸ್ಪಂದನೆ ಇವೇ ಮೊದಲಾದವುಗಳು ಜಯಾನಂದ ಹೋಬಳಿದಾರ್ ಅವರ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೇ ಜಿಲ್ಲೆಯ ರಾಜಕೀಯ ಲೆಕ್ಕಾಚಾರಗಳ ಬದಲಾಗಿ ಬಂಟ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೈತಪ್ಪಿದರೆ ಜಯಾನಂದ ಅವರಿಗೆ ಅವಕಾಶ ಒದಗಿ ಬರುವ ಸಾಧ್ಯತೆಗಳಿವೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಗುರುರಾಜ ಗಂಟಿಹೊಳೆ:
ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಗುರುರಾಜ ಗಂಟಿಹೊಳೆ ಅವರ ಹೆಸರೂ ಪ್ರಮುಖವಾಗಿ ಕೇಳಿಬಂದಿದೆ. ಆರ್.ಎಸ್.ಎಸ್ ಪ್ರಚಾರಕರಾಗಿ ತೊಡಗಿಕೊಂಡಿದ್ದ ಗುರುರಾಜ ಗಂಟೆಹೊಳೆ ಕೂಡ ಪ್ರಬಲ ಆಕಾಂಕ್ಷಿ. ಅವರು ಕಳೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ಪರ ಟೊಂಕಕಟ್ಟಿ ಕೆಲಸ ಮಾಡಿದ್ದರು. ಆರ್.ಎಸ್.ಎಸ್ ಪ್ರಮುಖರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಗಂಟಿಹೊಳೆ ಟಿಕೆಟಿಗಾಗಿ ಭಾರಿ ಪ್ರಯತ್ನದಲ್ಲಿದ್ದಾರೆ.
ಗೋವಿಂದ ಬಾಬು ಪೂಜಾರಿ:
ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರ ಹೆಸರು ಕೂಡ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬಂದಿದೆ. ಯಶಸ್ವಿ ಉದ್ಯಮಿ ಆಗಿರುವ ಗೋವಿಂದ ಪೂಜಾರಿ ಅವರು ತಮ್ಮ ಟ್ರಸ್ಟ್ ಮೂಲಕ ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. 11ಕ್ಕೂ ಅಧಿಕ ಉಚಿತ ಮನೆ ನಿರ್ಮಿಸಿ ಕೊಟ್ಟಿರುವುದು, ಶಿಕ್ಷಣ ಆರೋಗ್ಯ, ಕ್ರೀಡೆ ಸಾಂಸ್ಕೃತಿಕ ಕ್ಷೇತ್ರಕ್ಕೆ ನೆರವು, ಕೋವಿಡ್ ಕಾಲದಲ್ಲಿ ಪುಡ್ ಕಿಟ್ ಹಾಗೂ ಇನ್ನಿತರ ನೆರವು ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಗೋವಿಂದ ಬಾಬು ಪೂಜಾರಿ ಅವರು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷ ಟಿಕೆಟ್ ನೀಡಿದರೆ ಸ್ವರ್ಧಿಸಿವ ಇರಾದೆಯನ್ನೂ ಹೊಂದಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಕೆ. ಬಾಬು ಶೆಟ್ಟಿ:
ಆರ್.ಎಸ್.ಎಸ್ ಹಾಗೂ ಪಕ್ಷ ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಕೆ. ಬಾಬು ಶೆಟ್ಟಿ ಅವರು ಈ ಭಾರಿಯ ಟಿಕೆಟ್ ಆಕಾಂಕ್ಷಿ. ಕಳೆದ ಮೂರು ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಜೊತೆಗೆ ಎರಡು ಭಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, 2013 ಸಂದರ್ಭ ನೀಡಿದ ಭರವಸೆಯಂತೆ ಟಿಕೇಟ್ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಸದ್ಯ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಸಕ್ರೀಯವಾಗಿ ತಿರುಗಾಡುತ್ತಿದ್ದಾರೆ.
ಇನ್ನು ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಮುಖಂಡ ಕೆ. ಉದಯ ಕುಮಾರ್ ಶೆಟ್ಟಿ, ಉದ್ಯಮಿ ನಿತಿನ್ ನಾರಾಯಣ, ಸುಖಾನಂದ ಶೆಟ್ಟಿ ಮೊದಲಾದವರು ಹೆಸರುಗಳು ಕೇಳಿಬರುತ್ತಿದೆ.
ಅಚ್ಚರಿಯ ಅಭ್ಯರ್ಥಿ?
ಕುಂದಾಪುರ ಬಿಜೆಪಿ ನಾಯಕರೋರ್ವರಿಗೆ ಬೈಂದೂರು ಕ್ಷೇತ್ರದ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿರುವುದು, ಬಯೋಡಾಟಾ ಪಡೆದುಕೊಂಡಿರುವುದು ನೋಡಿದರೆ, ಯಾವ ಅಭ್ಯರ್ಥಿಯ ಬಗ್ಗೆಯೂ ಒಮ್ಮತ ಮೂಡದಿದ್ದರೆ ಪಕ್ಷದ ಕ್ಷೇತ್ರದ ಬಿಜೆಪಿ ಮುಖಂಡರೋರ್ವರು ಬೈಂದೂರಿನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಕಾಗಿ ಈ ಭಾರಿ ಬೈಂದೂರಿನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಬಿಜೆಪಿ ಪಕ್ಷ ಟಿಕೆಟ್ ಹಂಚಿಕೆ ಸಂದರ್ಭ ಸಹಜವಾಗಿ ಜಿಲ್ಲೆಯ ರಾಜಕೀಯ ಪರಿಸ್ಥಿತಿ, ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ, ಜಾತಿ ಲೆಕ್ಕಾಚಾರಗಳನ್ನು ಅಳೆದು ತೂಗಿ ಬಳಿಕ ನಿರ್ಧಾರಕ್ಕೆ ಬರಲಿದೆ. ಉಡುಪಿ ಹಾಗೂ ಕಾಪು ಕ್ಷೇತ್ರಗಳ ಅಭ್ಯರ್ಥಿ ಯಾರು ಎಂಬುವುದರ ಆಧಾರದ ಮೇಲೆ ಬೈಂದೂರು ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಲಿದೆ.