Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು
: ಸಮಸ್ತ ರಾಜ್ಯದ ಜನರಿಗೆ ಒಳ್ಳೆಯದಾಗಬೇಕು, ರಾಜ್ಯ ಸುಭಿಕ್ಷೆಯಿಂದ ಕೂಡಿರಬೇಕು, ಮುಂದಿನ ವಿಧಾನಸಭಾ ಚುನಾವಣೆ ಭಾರತೀಯ ಜನತಾ ಪಾರ್ಟಿ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ಅಕಾರದ ಚುಕ್ಕಾಣಿ ಹಿಡಿದು ನವನಾಡು ಕಟ್ಟುವ ಸಂಕಲ್ಪದೊಂದಿಗೆ ದೇವರ ಆಶೀರ್ವಾದ ಪಡೆಯಲು ಕೊಲ್ಲೂರು ದೇವಳಕ್ಕೆ ಬಂದಿರುವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ವೆ ವರದಿ ಆಧರಿಸಿ ಟಿಕೆಟ್:
ವಿಧಾನಸಭಾ ಚುನಾವಣೆಯಲ್ಲಿ ಸರ್ವೇ ವರದಿ ಆಧರಿಸಿ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಲಾಗಿದೆ, ಟಿಕೆಟ್ ಕೈ ತಪ್ಪಿರುವ ಶಾಸಕ ಎಚ್. ಕೆ. ಕುಮಾರಸ್ವಾಮಿ ಸೇರಿದಂತೆ ಕೆಲವರಿಗೆ ಅಸಮಾಧಾನವಿದೆ, ಅಸಮಾಧಾನಗೊಂಡಿರುವ ಎಲ್ಲ ಶಾಸಕರೊಂದಿಗೆ ಮಾತನಾಡಿ ಪಕ್ಷ ಬಿಡದಂತೆ ಮನವೊಲಿಸಲಾಗುವುದು ಎಂದರು.

ಪ್ರಯೋಗ ಶಾಲೆಯಾಗಿ ಅಲ್ಲ:
ಉಡುಪಿ ಜಿಲ್ಲೆಯಲ್ಲಿರುವ ಐವರು ಶಾಸಕರುಗಳ ಪೈಕಿ, ನಾಲ್ವರನ್ನು ಬದಲಾಯಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಉಡುಪಿ ಜಿಲ್ಲೆ ಪ್ರಯೋಗ ಶಾಲೆಯಂತೂ ಅಲ್ಲ, ಪಕ್ಷ ಸಧೃಢವಾಗಿರುವ ಭಾಗದಲ್ಲಿ ಬದಲಾವಣೆ ನಿರಂತರವಾಗಿ ಆಗುತ್ತಿರುತ್ತದೆ, ಅದರ ಒಂದು ಭಾಗವಾಗಿ ಇಲ್ಲಿ ಬದಲಾವಣೆಯಾಗಿದೆ ಅಷ್ಟೆ, ಇಲ್ಲಿರುವ ಶಾಸಕರು, ಎಂಪಿ ಹಾಗೂ ಎಲ್ಲಾ ಸಂಘಟನೆಯ ನಾಯಕರೊಂದಿಗೆ ಚರ್ಚಿಸಿ, ಎಲ್ಲರ ವಿಚಾರಧಾರೆಗಳನ್ನು ತಿಳಿದುಕೊಂಡೆ ಬದಲಾವಣೆ ಮಾಡಲಾಗಿದೆ, ಇದರಲ್ಲಿ ಅನ್ಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.

ಶಾಸಕರ ಗೈರು:
ಸಿಎಂ ಭೇಟಿಯ ಸಂದರ್ಭದಲ್ಲಿ ಜಿಲ್ಲೆಯ ಐವರು ಶಾಕಸರು ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ಅಸಮಾಧಾನದಿಂದ ಗೈರಾಗಿಲ್ಲ, ಚುನಾವಣೆ ಸಂದರ್ಭವಾದ ಕಾರಣ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ನಾನೇ ಸೂಚಿಸಿದ್ದೇನೆ. ಉಡುಪಿ ಶಾಸಕರು ಬೊಮ್ಮಾಯಿಯವರಿಗೆ ಟಿಕೆಟ್ ಕೊಡಿಸಲು ಆಗಲಿಲ್ಲ ಎಂದು ಅಲ್ಲಿನ ಕಾರ್ಯಕರ್ತರ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಸಿದ ಅವರು ನಾನು ಮುಖ್ಯಮಂತ್ರಿಯಾಗಿರುವುದರಿಂದ ಎಲ್ಲಾ ಟಿಕೆಟ್ ವಂಚಿತರು ನನ್ನ ಬಗ್ಗೆ ಬೊಟ್ಟು ಮಾಡುತ್ತಾರೆ, ನನಗೇನು ಬೇಸರವಿಲ್ಲ, ಇದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದರು.

ಜನ ಬೆಂಬಲದ ವಿಶ್ವಾಸ:
ಜಿಲ್ಲಾ ಪಂಚಾಯತ್‌ನಲ್ಲಿ ರ್ಸ್ಪಸದವರನ್ನು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಮುನ್ಸಿಪಾಲಿಟಿ ಚುನಾವಣೆಯಲ್ಲಿ ರ್ಸ್ಪಸದವರು ಎಂಪಿ, ಎಂಎಲ್‌ಎ ಆಗಿದ್ದಾರೆ, ಚುನಾವಣೆಗೆ ರ್ಸ್ಪಸಲು ಅನುಭವಬೇಕಾಗಿಲ್ಲ, ಜನ ಬೆಂಬಲ ಅಗತ್ಯವಾಗಿದ್ದು, ಜನ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಪ್ರಮೋದ್‌ಗೆ ಭವಿಷ್ಯವಿದೆ:
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಉತ್ತಮ ಭವಿಷ್ಯವಿದೆ, ಚುನಾವಣೆಯ ಸಂದರ್ಭದಲ್ಲಿ ಅವರನ್ನು ರಾಜ್ಯದುದ್ದಗಲಕ್ಕೂ ಅವರನ್ನು ಬಳಸಿಕೊಂಡು ಬರುವಂತ ದಿನಗಳಲ್ಲಿ ಉತ್ತಮ ಅವಕಾಶ ಮಾಡಿಕೊಡಲಾಗುವುದು ಎಂದರು.

ರಿಷಭ್ ಶೆಟ್ಟಿ ಭೇಟಿ ಆಕಸ್ಮಿಕ:
ಕೊಲ್ಲೂರು ದೇವಳದಲ್ಲಿ ಸಿಎಂ ಭೇಟಿಯ ಸಂದರ್ಭದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಜರಿರುವುದರ ಬಗ್ಗೆ ಪ್ರತಿಕ್ರಿಯಿಸಿ ಸಿಎಂ, ರಿಷಭ್ ಅವರು ತಮ್ಮ ಹುಟ್ಟೂರಾದ ಕುಂದಾಪುರದಲ್ಲಿರುವುದರಿಂದ, ಕೊಲ್ಲೂರಿನಲ್ಲಿ ನಮ್ಮ ಭೇಟಿಯಾಗಿದ್ದಾರೆ, ಇದೊಂದ ಆಕಸ್ಮಿಕ ಭೇಟಿಯಾಗಿದೆ, ಆದರೆ ಅವರ ಸಿದ್ಧಾಂತ ಹಾಗೂ ವಿಚಾರಧಾರೆಗಳು ನಮ್ಮ ಪಕ್ಷಕ್ಕೆ ಹತ್ತಿರವಾಗಿವುದರಿಂದ ಆಗಾಗ ಅವರು ಬಹಿರಂಗವಾಗಿ ನಮ್ಮ ಪಕ್ಷದ ಪರ ಪ್ರತಿಪಾದನೆ ಮಾಡುತ್ತಿದ್ದಾರೆ, ನಟ ಸುದೀಪ್ ಅವರಂತೆ ರಿಷಬ್ ಶೆಟ್ಟಿಯವರನ್ನು ಪ್ರಚಾರಕ್ಕೆ ತೊಡಗಿಸಿಕೊಳ್ಳುವ ಬಗ್ಗೆ ಈಗ ಯಾವುದೇ ಯೋಚನೆ ಇಲ್ಲ, ಅದು ದೇವರ ಇಚ್ಛೆ ಎಂದು ಮಾರ್ಮಿಕವಾಗಿ ನುಡಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಟ ರಿಷಭ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ರತ್ನ ರಮೇಶ ಕುಂದರ್, ಡಾ. ಅತುಲ್ ಕುಮಾರ ಶೆಟ್ಟಿ, ಶೇಖರ್, ಬಿ.ಎಸ್. ಸುರೇಶ ಶೆಟ್ಟಿ, ದೇವಳದ ಅರ್ಚಕರಾದ ರಾಮಚಂದ್ರ ಅಡಿಗ, ಶ್ರೀಧರ ಅಡಿಗ, ನರಸಿಂಹ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

Exit mobile version