Kundapra.com ಕುಂದಾಪ್ರ ಡಾಟ್ ಕಾಂ

ಗೆಳೆಯರ ಬಳಗ ಹಂಗಳೂರು ಅಧ್ಯಕ್ಷ ವಿ. ಬಾಬು ಶೆಟ್ಟಿ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಮ್ಮ ಸಮಾಜ ಸೇವೆ, ಸಾಮಾಜಿಕ ಚಟುವಟಿಕೆಗಳಿಂದ ಖ್ಯಾತರಾದ ಬಾಬಣ್ಣ ಎಂದೇ ಕರೆಯಲ್ಪಡುತ್ತಿದ್ದ ಗೆಳೆಯರ ಬಳಗ ಹಂಗ್ಳೂರು ಸಂಸ್ಥೆಯ ಅಧ್ಯಕ್ಷ ವಿ. ಬಾಬು ಶೆಟ್ಟಿ (೮೧) ಇವರು ಕೋಟೇಶ್ವರ ಅಂಕದಕಟ್ಟೆಯ ಸ್ವಗೃಹದಲ್ಲಿ ಸೋಮವಾರ ಎ. ೧೭ರಂದು ನಿಧನರಾದರು.

ಗೆಳೆಯರ ಬಳಗ ಹಂಗ್ಳೂರು ಸಂಘ ಸ್ಥಾಪನೆಯಾದ ೧೯೬೫ ರಿಂದ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಇವರು ೫೮ ವರ್ಷಗಳಿಂದ ಸತತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಂಗ್ಳೂರು ವಿನಾಯಕ ಟಾಕೀಸ್ ಬಳಿ, ಸಂಘದ ಸ್ವಂತ ಕಟ್ಟಡದ ನಿರ್ಮಾಣಗೊಂಡ ನಂತರ ಶಿಕ್ಷಣ, ಸಂಗೀತ, ನಾಟಕ, ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲೂ ಚಟುವಟಿಕೆ ನಡೆಸುವ ಕೇಂದ್ರವನ್ನಾಗಿ ಗೆಳೆಯರ ಬಳಗವನ್ನು ರೂಪಿಸಿದವರು ಬಾಬು ಶೆಟ್ಟಿಯವರು.

ಸಂಗೀತ ಭಾರತಿ ಸಂಸ್ಥೆಗೆ ೨೦ ವರ್ಷಗಳ ಕಾಲ ಸಂಗೀತ ಶಾಲೆ ನಡೆಸಲು ಅವಕಾಶ ನೀಡಿದ್ದರು. ಮಕ್ಕಳಿಗಾಗಿ ಬಾಲವಾಡಿ ನಡೆಸುತ್ತಿದ್ದರು. ಶಿಶು ಮಂದಿರ ಆರಂಭಿಸಿದರು. ಸಾಹಿತ್ಯಾಸಕ್ತರಿಗಾಗಿ ಗ್ರಂಥಾಲಯ ಮಾಡಿದ್ದರು. ಇವರ ನೇತೃತ್ವದಲ್ಲಿ ರಂಗ ಭೂಮಿ ಚಟುವಟಿಕೆಗೆ ಬಹಳ ಪ್ರೋತ್ಸಾಹ ದೊರೆತು, ಪ್ರತಿಭಾವಂತರು ಅಭಿನಯಿಸಿದ ನಾಟಕ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿತ್ತು.

ಗೆಳೆಯರ ಬಳಗದಲ್ಲಿ ಕೋಟ ಶಿವರಾಮ ಕಾರಂತರೂ ಸೇರಿ ಹಿರಿಯ ಸಾಹಿತಿಗಳು, ಸಂಗೀತಗಾರರು, ಕಲಾವಿದರು, ಸಾಧಕರನ್ನು ಕರೆದು ಗೌರವಿಸಿದರು. ಬಾಬು ಶೆಟ್ಟಿಯವರ ಸೇವೆಗೆ ಹಲವಾರು ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ. ರಾಜ್ಯೋತ್ಸವದ ದಿನ ಜಿಲ್ಲಾ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗಿದೆ.

ಬಾಬು ಶೆಟ್ಟಿಯವರು ಅವಿವಾಹಿತರಾಗಿದ್ದರೂ ಹಂಗ್ಳೂರು, ಕುಂದಾಪುರ, ಕೋಟೇಶ್ವರ ಪರಿಸರದ ನೂರಾರು ಮನೆಯವರಿಗೆ ಆತ್ಮೀಯರಾಗಿದ್ದು, ಎಲ್ಲಾ ಸಮಾರಂಭಗಳಲ್ಲೂ ಆಹ್ವಾನಿಸಲ್ಪಡುತ್ತಿದ್ದರು. ಇವರ ಅಗಲಿಕೆ ಸಾಮಾಜಿಕ, ಸಾಂಸ್ಕೃತಿಕ ಲೋಕದ ಸಾಧಕರನ್ನು ಕಳೆದುಕೊಂಡಂತಾಗಿದೆ.

ಇವರು ಬರೆದು ಪ್ರಕಟಿಸಿದ ತಮ್ಮ ಆತ್ಮ ವೃತ್ತಾಂತ “ನಾನಾರೆಂಬುದು ನಾನಲ್ಲ” ಬಹಳ ಜನಪ್ರಿಯವಾಯಿತು. ಇವರ ನಿಧನಕ್ಕೆ ಹಲವು ಗಣ್ಯರು, ಸಂಘ-ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.

Exit mobile version