Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ ಪದ್ಮಾವತಿ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ

ಬೈಂದೂರು: ನಾವುಂದ ಕಡಲತೀರದ ಬೊಬ್ಬರ್ಯನಹಿತ್ಲುವಿನಲ್ಲಿ ನಿರ್ಮಿಸಲು ಉದ್ದೇಶಿಸಿದ ಪದ್ಮಾವತಿ ಅಮ್ಮನವರ ದೇವಸ್ಥಾನ ಕಾಮಗಾರಿಗೆ ಉದ್ಯಮಿ ಡಾ. ಜಿ. ಶಂಕರ್ ಬುಧವಾರ ಚಾಲನೆ ನೀಡಿದರು. ಆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ದೇವಸ್ಥಾನ ನಿರ್ಮಾಣದಲ್ಲಿ ಪರಿಸರದ ಎಲ್ಲ ಜಾತಿಯವರನ್ನು ಒಡಗೂಡಿಸಿಕೊಂಡಿರುವುದು ಸ್ತುತ್ಯರ್ಹ ಕಾರ್ಯ. ದೇವಾಲಯ ನಿರ್ಮಾಣವಾದ ಬಳಿಕ ಅಲ್ಲಿ ಅನೂಚಾನವಾಗಿ ಪೂಜೆ ಪುನಸ್ಕಾರ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿ ನಿರ್ಮಾಣ ಕಾರ್ಯಕ್ಕೆ ನೆರವಿನ ಭರವಸೆಯಿತ್ತರು. ಸಭೆಯನ್ನು ಉದ್ಘಾಟಿಸಿದ ಶಾಸಕ ಕೆ. ಗೋಪಾಲ ಪೂಜಾರಿ ದೇವಸ್ಥಾನದ ಪುಷ್ಕರಣಿಯ ಪುನರುಜ್ಜೀವನಕ್ಕೆ ಸರಕಾರದಿಂದ ರೂ. ೫೦ ಲಕ್ಷ ಮಂಜೂರು ಮಾಡಿಸಿದ್ದು, ಶೀಘ್ರ ಟೆಂಡರ್ ಕರೆದು ಕೆಲಸ ಆಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಣು ಡಿ. ಚಂದನ್ ಅಧ್ಯಕ್ಷತೆ ವಹಿಸಿದ್ದರು. ಭೂಮಿ ಪೂಜೆ ನೆರವೇರಿಸಿದ ಪುರೋಹಿತ ಆನಗಳ್ಳಿ ಚೆನ್ನಕೇಶವ ಭಟ್ ಆಶೀರ್ವಚನಗೈದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕೋಟ ಅಮೃತೇಶ್ವರಿ ದೇವಸ್ಥಾನದ ಧರ್ಮದರ್ಶಿ ಆನಂದ ಸಿ. ಕುಂದರ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಮಹೇಂದ್ರ ಪೂಜಾರಿ, ಎಸ್. ರಾಜು ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ, ಉದ್ಯಮಿಗಳಾದ ಸುರೇಶ ಆರ್. ಕಾಂಚನ್, ಗೋಪಾಲ ಎಸ್. ಪುತ್ರನ್, ಎನ್. ಕೆ. ಬಿಲ್ಲವ, ಜಗದೀಶ ಶೆಟ್ಟಿ, ವೆಂಕಟರಮಣ ಖಾರ್ವಿ, ರಮೇಶ ಎಚ್. ಕುಂದರ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕುಂದರ್, ಆಡಳಿತ ಸಮಿತಿ ಗೌರವಾಧ್ಯಕ್ಷ ಜಿ. ಡಿ. ಮಸ್ಕಿ ಮುಖ್ಯ ಅತಿಥಿಗಳಾಗಿದ್ದರು.

ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಆನಂದ ಆರ್. ತೋಳಾರ್ ಸ್ವಾಗತಿಸಿದರು. ಗೋವಿಂದ ಎಂ. ಪ್ರಸ್ತಾವನೆಗೈದರು. ಕಾರ್ಯದರ್ಶಿ ರತ್ನಾಕರ ಕೆ. ವಂದಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿದರು.

Exit mobile version