Kundapra.com ಕುಂದಾಪ್ರ ಡಾಟ್ ಕಾಂ

ಹಿಂದುತ್ವ ಯಾರ ಮನೆ ಆಸ್ತಿಯಲ್ಲ. ಭಾವನೆ ಜೊತೆ ಆಟವಾಡುವ ಬಿಜೆಪಿಗೆ ಜನರ ಬದುಕಿನ ಬಗ್ಗೆ ಚಿಂತೆ ಇಲ್ಲ: ಡಿ.ಕೆ. ಶಿವಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಹಿಂದೂತ್ವ ಎಂಬುದು ಯಾರ ಮನೆಯ ಆಸ್ತಿಯೂ ಅಲ್ಲ. ನಾನೂ ಹಿಂದೂನೇ. ಬಿಜೆಪಿ ಬದುಕಿನ ಬಗ್ಗೆ ಚಿಂತನೆ ಮಾಡದೇ, ಭಾವನೆ ಜೊತೆಗೆ ಆಟವಾಡುತ್ತಿದೆ. ಬೆಲೆ ಏರಿಕೆ, ಉದ್ಯೋಗ, ಭವಿಷ್ಯದ ಬಗ್ಗೆ ಅವರಿಗೆ ಚಿಂತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಅವರು ಇಲ್ಲಿನ ಯಡ್ತರೆ ಜೆ.ಎನ್.ಆರ್. ಸಭಾಭವನದಲ್ಲಿ ಜರುಗಿದ ಬೈಂದೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹತ್ತಾರು ಸರಕಾರಿ ಉದ್ದಿಮೆ ಸ್ಥಾಪನೆ, ಜನರ ಸಶಕ್ತಿಕರಣಕ್ಕೆ ನೂರಾರು ಯೋಜನೆಗಳನ್ನು ತಂದಿತ್ತು. ಹಾಗಾಗಿಯೇ ಇಂದು ದೇಶ ಪ್ರಗತಿಯ ಹಾದಿಯಲ್ಲಿದೆ. ಆದರೆ ಬಿಜೆಪಿ ಸರಕಾರ ಜನರಿಗೆ ಉಪಯೋಗ ಆಗುವ ಯಾವ ಯೋಜನೆಯನ್ನೂ ಜಾರಿ ಮಾಡಿಲ್ಲ. ಬದಲಿಗೆ ಭಾವನೆ ಜೊತೆಗೆ ಆಟವಾಡುತ್ತಿದೆ. ಅವರು ಹಿಂದೂಗಳು ಮುಂದು ಎಂದರೆ, ನಾವೆಲ್ಲರೂ ಸೇರಿ ಒಂದು ಎಂದು ಕಾಂಗ್ರೆಸ್ ಹೇಳುತ್ತದೆ. ಎಲ್ಲಾ ಧರ್ಮ, ಜನಾಂಗ, ಜಾತಿ ಸೇರಿಯೇ ಒಂದು ದೇಶವಾಗಿದೆ ಎಂದರು.

ಕಷ್ಟಕಾಲದಲ್ಲಿ ಜೊತೆಗಿರುವವರೆಲ್ಲ ನಮ್ಮ ನಾಯಕರು. ಹೊಸಬರು ಹಳಬರು ಎಂಬ ಭೇದ ಬೇಡ. ವಯಸ್ಸಾದವರನ್ನು ಮನೆಯಿಂದ ಹೊರ ಹಾಕಲು ಸಾಧ್ಯವಿಲ್ಲ. ಹಾಗೆಯೇ ವಯಸ್ಸಾದವರನ್ನು ಪಕ್ಷದಿಂದಲೂ ಹೊರಹಾಕಲು ಸಾಧ್ಯವಿಲ್ಲ. ಎಲ್ಲರೂ ಜೊತೆಗೂಡಿ ಸಾಗುವುದೇ ಗೆಲುವು ಎಂದರು.

ಗೋಪಾಲ ಪೂಜಾರಿ ಅವರು ಅಧಿಕಾರ ಇರಲಿ, ಇಲ್ಲದೇ ಇರಲಿ ಜನರಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಅವರ ವ್ಯಾಪಾರ ವ್ಯವಹಾರ ನಷ್ಟದಲ್ಲಿದ್ದರೂ ಲೆಕ್ಕಿಸದೇ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಬೈಂದೂರು ಕಾಂಗ್ರೆಸ್ ಪಕ್ಷದ ಸರ್ವಸಮ್ಮತ ನಾಯಕ ಎಂಬುದಕ್ಕೆ ಎಂಎಲ್ಎ ಅಭ್ಯರ್ಥಿಗೆ ಅರ್ಜಿ ಹಾಕದಿರುವುದೇ ಸಾಕ್ಷಿಯಾಗಿದ್ದು, ಚುನಾವಣೆಯಲ್ಲಿಯೂ ಅತ್ಯಧಿಕ ಬಹುಮತದೊಂದಿಗೆ ಗೆದ್ದು ಬರಲಿದ್ದಾರೆ ಎಂದರು.

ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ, ಕಳೆದ ಅವಧಿಯಲ್ಲಿ ಬಿಜೆಪಿ ಅಪಪ್ರಚಾರದಿಂದಲೇ ಗೆದ್ದು ಬಂದಿತ್ತು. ಪ್ರತಿಭಾರಿ ಇಂತಹ ಸುಳ್ಳು ಕಥೆಯನ್ನು ಸೃಷ್ಟಿಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಶಿವಮೊಗ್ಗದ ಹರ್ಷ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ಬಿಜೆಪಿ ನಾಯಕರು ಹಣ ಕೊಟ್ಟು ಬಂದಿದ್ದಾರೆ. ಆದರೆ ಅದೇ ಪಕ್ಷದ ಕಾರ್ಯಕರ್ತ ಉದಯ ಗಾಣಿಗನನ್ನು ಬಿಜೆಪಿಯ ಮುಖಂಡರೇ ಕೊಲೆ ಮಾಡಿದ್ದಲ್ಲದೇ ಅವರ ಕುಟುಂಬವನ್ನು ಸಂಕಷ್ಟಕ್ಕೆ ನೂಕಿದೆ. ಮುಂದೆ ಬಿಜೆಪಿಯ ಇಂತಹ ಕುತಂತ್ರ ನಡೆಯುವುದಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಕೆ. ಬಾಬು ಶೆಟ್ಟಿ, ಜಿಪಂ ಮಾಜಿ ಸದಸ್ಯ ಶಂಕರ ಪೂಜಾರಿ, ಮಾಜಿ ತಾಪಂ ಸದಸ್ಯರುಗಳಾದ ವೆಂಕಟ ಪೂಜಾರಿ, ಸದಾಶಿವ ಪಡುವರಿ, ದಸ್ತಗಿರಿ ಸಾಹೇಬ್, ಹೇರೂರು ಗ್ರಾಪಂ ಅಧ್ಯಕ್ಷ ಸುರೇಶ್ ನಾಯ್ಕ್, ಬಿಜೆಪಿ ಮುಖಂಡ ವಂಡ್ಸೆ ದೀಪಕ್ ಕುಮಾರ್ ಶೆಟ್ಟಿ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಮುಖಂಡ ಕೆ. ಬಾಬು ಶೆಟ್ಟಿ ಮಾತನಾಡಿ, 32 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ದುಡಿದಿದ್ದೇನೆ. ಆದರೆ ಬಿಜೆಪಿ ಪಕ್ಷ ನಮಗೆ ನಂಬಿಸಿ ಮೋಸ ಮಾಡಿದೆ. ಎಲ್ಲಾ ಅರ್ಹತೆ ಇದ್ದರೂ ಆಸೆ ತೋರಿಸಿ ಕೊನೆಗೆ ನಿರಾಸೆಗೊಳಿಸುತ್ತಲೇ ಬಂದಿದೆ. ಹಾಗಾಗಿ ಪಕ್ಷ ಬಿಡುವ ನಿರ್ಧಾರ ಕೈಗೊಂಡು, ಕೆ. ಗೋಪಾಲ ಪೂಜಾರಿ ಅವರ ಕೈಗಳನ್ನು ಬಲಪಡಿಸಲು ನಾವೆಲ್ಲರೂ ಬಂದಿದ್ದೇವೆ ಎಂದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಂ.ಎ. ಗಪೂರ್, ಯು.ಬಿ. ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಎಸ್. ರಾಜು ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ರಘುರಾಮ ಶೆಟ್ಟಿ, ಮದನ್ ಕುಮಾರ್ ಉಪ್ಪುಂದ, ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಗೌರಿ ದೇವಾಡಿಗ, ಡಾ. ಸುಬ್ರಹ್ಮಣ್ಯ ಭಟ್, ಮಣಿಕಂಠ ದೇವಾಡಿಗ, ರಿಯಾಜ್ ಅಹಮ್ಮದ್, ಮಹಾಲಿಂಗ ನಾಯ್ಕ್, ಸತೀಶ್ ಕೆ.ವಿ., ಸುಬ್ರಹ್ಮಣ್ಯ ಪೂಜಾರಿ, ವಿಜಯ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version