Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕರ್ಣಾಟಕ ಬ್ಯಾಂಕಿನ ನಿಕಟಪೂರ್ವ ಎಂಡಿ ಮಹಾಬಲೇಶ್ವರ ಎಂ.ಎಸ್ ಅವರಿಗೆ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗ್ರಾಹಕರ ಸೇವೆ ಬ್ಯಾಂಕಿನ ಪ್ರಥಮ ಆದ್ಯತೆಯಾಗಿರಬೇಕು. ಡಿಜಿಟಲ್ ಪ್ರಾಡಕ್ಟ್ಸ್ ಸುಲಭವಾಗಿ ಗ್ರಾಹಕರು ಅರಿಯುವಂತಾಗಬೇಕು. ಬ್ಯಾಂಕಿನ ಎಲ್ಲಾ ಹುದ್ದೆಯವರು ಗ್ರಾಹಕರಿಗೆ ಸಿಗುವಂತಾಗಬೇಕು. ಬ್ಯಾಂಕಿನ ಆರ್ಥಿಕ ಸ್ಥಿತಿಗಳು ಸುದೃಢವಾಗಿರಬೇಕು. ಗ್ರಾಹಕರಿಗೆ ಅಪೇಕ್ಷೆಯಂತೆ ಹೆಚ್ಚಿನ ಸೌಲಭ್ಯ ನೀಡುವಂತಾಗಬೇಕು. ಆಗ ಗ್ರಾಹಕರಿಗೆ ನಮ್ಮ ಬ್ಯಾಂಕ್ ಎಂದು ವಿಶ್ವಾಸ ಬರುತ್ತದೆ. ದೃಢತೆ, ಸುದೃಢತೆಯಲ್ಲಿ ಕರ್ಣಾಟಕ ಬ್ಯಾಂಕ್ ಅಗ್ರ ಸ್ಥಾನಕ್ಕೆ ಮುಂದುವರೆಯುತ್ತಿದೆ. ಗ್ರಾಹಕ ಕೇಂದ್ರಿತ ಈ ಬ್ಯಾಂಕ್ ಇಂದು ಇತರ ಬ್ಯಾಂಕ್‌ಗಳೂ ಗಮನಹರಿಸುವಂತಾಗುತ್ತದೆ. ನೂರು ವರ್ಷ ದಾಟಿದ ಬ್ಯಾಂಕ್‌ಗಳಲ್ಲಿ ಕರ್ಣಾಟಕ ಬ್ಯಾಂಕ್ ಮಾತ್ರ ಎಲ್ಲ ವರ್ಷಗಳಲ್ಲಿ ಲಾಭದಾಯಕವಾಗಿ ಬೆಳೆದು ದಾಖಲಿಸಲ್ಪಟ್ಟಿದೆ ಎಂದು ಕರ್ಣಾಟಕ ಬ್ಯಾಂಕಿನ ನಿಕಟಪೂರ್ವ ಎಂ. ಡಿ. ಹಾಗೂ ಸಿ.ಇ.ಒ. ಮಹಾಬಲೇಶ್ವರ ಎಂ. ಎಸ್. ಕುಂದಾಪುರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

ಕುಂದಾಪುರದ ಕರ್ಣಾಟಕ ಬ್ಯಾಂಕ್ ಗ್ರಾಹಕರು, ಅಭಿನಂದನಾ ಸಮಿತಿ ಹೆಸರಲ್ಲಿ ಕುಂದಾಪುರ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ನುಡಿದರು.

ಕರ್ಣಾಟಕ ಬ್ಯಾಂಕ್‌ನ ಸ್ಥಾಪಕರು ಲಾಭದ ಒಂದಂಶ ಸಮಾಜದ ಅಭಿವೃದ್ಧಿಗಾಗಿ ಬಳಸಬೇಕು ಎಂದು ಸೂಚಿಸಿದ್ದರು. ಇಂದು ಕರ್ಣಾಟಕ ಬ್ಯಾಂಕ್ ಸಮಾಜಮುಖಿ ಬ್ಯಾಂಕ್ ಆಗಿ ಗುರುತಿಸಲ್ಪಟ್ಟಿದೆ. ಈ ಸಾಧನೆಗೆ ಗ್ರಾಹಕರು, ಸಿಬ್ಬಂದಿ ವರ್ಗದವರೂ ಕಾರಣ. ಗ್ರಾಹಕರು ಮತ್ತು ಬ್ಯಾಂಕಿನ ಸಂಬಂಧ ಶಾಶ್ವತ ಎಂದು ಹೇಳಿದ ಮಹಾಬಲೇಶ್ವರ ಎಂ. ಎಸ್. ಕರ್ಣಾಟಕ ಬ್ಯಾಂಕ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಬ್ಯಾಂಕ್ ಆಗಿ ಬೆಳೆಯಲು ಎಲ್ಲರೂ ಕಟಿಬದ್ಧರಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ತಿಳಿಸಿ ಕುಂದಾಪುರದಲ್ಲಿ ಸಾರ್ವಜನಿಕವಾಗಿ ಅಭಿನಂದಿಸಲು ಕಾರ್ಯಕ್ರಮ ರೂಪಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ. ಜಯರಾಮ ಭಟ್, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಭಾಗವಹಿಸಿದ್ದರು.

ಅಭಿನಂದನಾ ಸಮಿತಿ ಪರವಾಗಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಮಹಾಬಲೇಶ್ವರ ಎಂ. ಎಸ್. ಅವರನ್ನು ಸನ್ಮಾನಿಸಿ ಗೌರವಿಸಿದರು.

ಅಭಿನಂದನಾ ಸಮಿತಿ ಸಂಚಾಲಕ ಕೆ. ಸೀತಾರಾಮ ನಕ್ಕತ್ತಾಯ ಸ್ವಾಗತಿಸಿ, ಪಾಸ್ತಾವಿಕ ಮಾತುಗಳನ್ನಾಡಿದರು. ಹಟ್ಟಿಯಂಗಡಿ ಬಾಲಚಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ನೇತ್ರಾವತಿ ಭಟ್, ಮೇಘಾ ಸಚಿನ್, ಅನ್ನಪೂರ್ಣ ಮಹಾಬಲೇಶ್ವರ ಅವರನ್ನು ಗೌರವಿಸಿದರು.

ಪ್ರಭಾಕರ ಶೆಟ್ಟಿ, ವಾಸುದೇವ ಹಂದೆ, ಅಮೃತ ತೌಳ, ಸಚಿನ್ ನಕ್ಕತ್ತಾಯ ಅತಿಥಿಗಳನ್ನು ಗೌರವಿಸಿದರು. ಕರ್ಣಾಟಕ ಬ್ಯಾಂಕ್‌ನ ೧೦೦ ವರ್ಷಗಳ ಬೆಳವಣಿಗೆಯ ಇತಿಹಾಸದ ಚಲನಚಿತ್ರ ಪ್ರದರ್ಶಿಸಲಾಯಿತು. ಕರ್ಣಾಟಕ ಬ್ಯಾಂಕಿನ ಬಹುತೇಕ ಹಿರಿಯ, ಕಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಗ್ರಾಹಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಮಹಾಬಲೇಶ್ವರ ಎಂ. ಎಸ್. ಅವರನ್ನು ಅಭಿನಂದಿಸಿದರು. ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸುಪ್ರೀತ ಚಾತ್ರ ವಂದಿಸಿದರು.

Exit mobile version