Kundapra.com ಕುಂದಾಪ್ರ ಡಾಟ್ ಕಾಂ

ಎನ್ನೆಸ್ಸೆಸ್ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತದೆ : ಅಭಿನಂದನ ಶೆಟ್ಟಿ

ಬೈಂದೂರು: ಮನುಷ್ಯನಲ್ಲಿ ನಾಯಕತ್ವದ ಗುಣ, ಸಮಾಜಮುಖಿ ಬದುಕನ್ನು ರೂಪಿಸುವುದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ. ಮನುಷ್ಯ ಜೀವನದಲ್ಲಿ ಸಫಲತೆ, ಯಶಸ್ಸನ್ನು ಕಂಡುಕೊಳ್ಳಬೇಕಾದರೆ ಅವನಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಆತ್ನವಿಶ್ವಾಸ ಅತ್ಯಗತ್ಯ. ಶಿಕ್ಷಣ ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಕಿಸಿಕೊಡಬಲ್ಲದೇ ಎಂಬುದನ್ನು ಯೋಚಿಸಿ ಶಿಕ್ಷಣ ಜೊತೆಗೆ ವ್ಯಕ್ತಿತ್ವ ರೂಪಿಸುವ, ನಾಯಕತ್ವ ಬೆಳೆಸುವ ಎನ್ನೆಸ್ಸೆಸ್‌ನಂತಹ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅವಶ್ಯಕ ಎಂದು ರೋಟರಿ ಜಿಲ್ಲೆ 3180ರ ಮಾಜಿ ಅಸಿಸ್ಟೆಂಟ್ ಗವರ್ನರ್ ಅಭಿನಂದನ ಎ.ಶೆಟ್ಟಿ ಹೇಳಿದರು.

ಅವರು ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ‘ರಾಷ್ಟ್ರೀಯ ಸೇವಾ ಯೋಜನಾ ಘಟಕದ ೨೦೧೫ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ಮನುಷ್ಯ ಸಮಾಜಮುಖಿಯಾದ ಬದುಕು ನಡೆಸಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನ ಪಾಠೇತರ ಚಟುವಟಿಕೆಗಳಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಎನ್ನೆಸ್ಸೆಸ್ ಇಂತಹ ಚಟುವಟಿಕೆಗಳಿಗೆ ವೇದಿಕೆಯಾಗಿದ್ದು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಲು ಸಹಾಯಕವಾಗಲಿದೆ ಎಂದರು.

ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್.ಎನ್. ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪಾಲಾಕ್ಷ, ಗಂಗೊಳ್ಳಿ ಎಸ್.ವಿ.ಶಾಲೆಗಳ ಸಂಚಾಲಕ ಎನ್.ಸದಾಶಿವ ನಾಯಕ್ ಶುಭ ಹಾರೈಸಿದರು. ಸ.ವಿ. ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ನಾರಾಯಣ ನಾಯ್ಕ್, ಉಪನ್ಯಾಸಕ ವೆಂಕಟೇಶಮೂರ್ತಿ, ಕಛೇರಿಯ ಸಹಾಯಕರಾದ ಭಾಸ್ಕರ ಎಚ್.ಜಿ., ನಮಿತಾ ಆರ್.ಶೆಣೈ ಉಪಸ್ಥಿತರಿದ್ದರು.

ಸ.ವಿ.ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪನ್ಯಾಸಕ ಥಾಮಸ್ ಪಿ.ಎ. ಕಾರ್ಯಕ್ರಮ ನಿರೂಪಿಸಿದರು.

Exit mobile version