ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಬ್ಬಲ್ ಇಂಜಿನ್ ಸರಕಾರದ ಸಾಧನೆಯನ್ನು ಜನರು ಗಮನಿಸುತ್ತಿದ್ದಾರೆ. ಉಭಯ ಸರಕಾರಗಳ ಅಭಿವೃದ್ಧಿ ಕಾರ್ಯಗಳು, ರಾಷ್ಟ್ರೀಯತೆಯೆಡೆಗಿನ ಬದ್ಧತೆ, ಕುಂದಾಪುರ ಕ್ಷೇತ್ರದಲ್ಲಾದ ಅಭಿವೃದ್ಧಿ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಭಾವ ಕಿರಣ್ ಕೊಡ್ಗಿ ಅವರನ್ನು ದಾಖಲೆಯ ಅಂತರದಲ್ಲಿ ಗೆಲ್ಲಿಸಲಿದೆ ಎಂದು ದೆಹಲಿ ಸರ್ಕಾರದ ವಿಪಕ್ಷದ ನಾಯಕ, ಉಡುಪಿ ಜಿಲ್ಲಾ ಬಿಜೆಪಿ ಉಸ್ತುವಾರಿ ವಿಜೇಂದರ್ ಗುಪ್ತ ಹೇಳಿದರು.
ಅವರು ಮಂಗಳವಾರ ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಯಾವ ತಂತ್ರಗಾರಿಕೆಯೂ ಈ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ. ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಡಬ್ಬಲ್ ಇಂಜಿನ್ ಸರ್ಕಾರ ಮುಂದುವರಿಯಲಿದೆ ಎಂದರು.
ಕೇಂದ್ರ ಸರ್ಕಾರದ ದಿಟ್ಟ ನಿಲುವಿನಿಂದ ದೇಶ, ಕರ್ನಾಟಕದಲ್ಲಿ ಜನ ನಿರ್ಭೀತಿಯಿಂದಿದ್ದಾರೆ. ಶಾಂತಿ ಸುವ್ಯವಸ್ಥತೆಗೆ ಸರ್ಕಾರ ಆಧ್ಯತೆ ನೀಡಿದೆ. ಇವತ್ತು ಬಾಂಬ್ ಸ್ಪೋಟದ ಪ್ರಕರಣಗಳು ಇಲ್ಲ, ವಿದ್ವಾಂಸಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ.. ಭದ್ರತೆಗೆ ಧಕ್ಕೆ ತರುವ, ಗಲಾಭೆಗಳ ಸೃಷ್ಟಿಗೆ ಉತ್ತೇಜನ ನೀಡುವ ಸಂಘಟನೆಗಳನ್ನು ನಿಷೇಧಿಸಲಾಗಿದೆ ಎಂದರು.
40% ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇದೆಲ್ಲವೂ ದಾಖಲೆ ರಹಿತ ಆರೋಪ. ಕಾಂಗ್ರೆಸ್ ಬಳಿ ಈ ಬಗ್ಗೆ ಸ್ಪಷ್ಟವಾದ ದಾಖಲೆ ಇದ್ದರೆ ಕಾನೂನು ಹೋರಾಟ ಮಾಡಲಿ, ಸುಮ್ಮನೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ, ಅದು ಗಾಳಿಯಲ್ಲಿ ಗುಂಡು ಹಾರಿಸಿದಂತೆ ಎಂದರು.
ಈ ವೇಳೆ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಕ್ಷೇತ್ರದ ಪ್ರಭಾರಿ ಶ್ಯಾಮಲ ಕುಂದರ್, ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ ಬೀಜಾಡಿ, ಸತೀಶ ಪೂಜಾರಿ ವಕ್ವಾಡಿ, ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು ಉಪಸ್ಥಿತರಿದ್ದರು.