ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಡವರು, ದುರ್ಬಲರ ಏಳಿಗೆಗಾಗಿ ಭಾರತೀಯ ಜನತಾ ಪಕ್ಷ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಫಲವಾಗಿ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ. ಕರಾವಳಿಯಲ್ಲಿ 19 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಸಚಿವ ಕೊಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಆಯೋಜಿಸಲಾದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬೈಂದೂರು ಕ್ಷೇತ್ರದ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಜನರ ನಡುವೆಯೇ ಸಾಮಾನ್ಯರಂತೆ ಬದುಕಿದವರು. ಅವರ ಬಗ್ಗೆ ಕ್ಷೇತ್ರದ ಜನರು ಪ್ರೀತಿ ತೋರುತ್ತಿದ್ದಾರೆ. ವಿಧಾನಸೌಧದಲ್ಲಿ ಇಂತಹ ವ್ಯಕ್ತಿಗಳು ಇದ್ದರೆ ಸೊಬಗು. ಈ ಭಾರಿ ಗುರುರಾಜ ಗಂಟಿಹೊಳೆ ಅವರ ಗೆಲುವು ನಿಶ್ಚಿತ ಎಂದರು.
ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಪ್ರಚಾರದಲ್ಲಿ ಸಕ್ರಿಯವಾಗಿಲ್ಲದಿರುವ ಬಗ್ಗೆ ಪ್ರತಿಕ್ರಿಯಿಸಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಕುಂದಾಪು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಅದರಂತೆ ಬೈಂದೂರು ಶಾಸಕರೂ ಆಶೀರ್ವಾದ ಮಾಡಲಿದ್ದಾರೆ ಎಂಬ ಭರವಸೆ ಇದೆ ಎಂದರು. ಪಕ್ಷ ತೊರೆದ ಬಾಬು ಶೆಟ್ಟಿ ಅವರು ಎಲ್ಲರಂತೆಯೇ ನನಗೆ ಆತ್ಮೀಯರಾಗಿದ್ದವರು. ಅವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕರು ನಾನೂ ಹಿಂದು ಎನ್ನುತ್ತಿದ್ದಾರೆ. ಬಿಜೆಪಿ ಪಕ್ಷ ಹಿಂದುತ್ವದ ಗುತ್ತಿಗೆ ಪಡೆದಿಲ್ಲ ನಿಜ. ಆದರೆ ನಾನು ಹಿಂದು ಎನ್ನುವ ಕಾಂಗ್ರೆಸ್ ನಾಯಕರು ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾನೂನು ಪರವಾಗಿ ನಿಂತರೆ ಅವರ ಮಾತಿಗೊಂದು ಬೆಲೆ ಬರಲಿದೆ ಎಂದ ಸಚಿವರು ಕೇಸರಿ ಶಾಲು ಕಂಡರೆ ಅಲರ್ಜಿ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಕೇಸರಿ ಪ್ರೀತಿ ಹುಟ್ಟಿರುವುದು ಚುನಾವಣಾ ತಂತ್ರ ಎಂದರು.
ಈ ವೇಳೆ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಜ್ಯೋತಿ ಪಾಂಡ್ಯ ಸೇಥ್, ಜಿಲ್ಲಾ ಪ್ರಭಾರಿ ಶ್ಯಾಮಲಾ ಎಸ್. ಕುಂದರ್, ಮಾಜಿ ತಾಪಂ ಉಪಾಧ್ಯಕ್ಷ ಮಹೇಂದ್ರ ಪೂಜಾರಿ, ಜಿಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದ ಖಾರ್ವಿ, ಬೈಂದೂರು ಬಿಜೆಪಿ ಮಾಧ್ಯಮ ಸಂಚಾಲಕ ಶ್ರೀಗಣೇಶ್ ಗಾಣಿಗ ಉಪ್ಪುಂದ ಇದ್ದರು.