Kundapra.com ಕುಂದಾಪ್ರ ಡಾಟ್ ಕಾಂ

ಕಾಡುಪ್ರಾಣಿಗಳಿಗಳ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಸೋತಿದೆ

ಕುಂದಾಪುರ: ಕೃಷಿಗೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ವ್ಯಾಪಕವಾಗಿ ಕಾಡುತ್ತಿದ್ದು, ಸಮಸ್ಯೆಯ ಪರಿಹಾರಕ್ಕೆ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮಗಳ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ಚೀನ ಮೊದಲಾದ ರಾಷ್ಟ್ರಗಳಲ್ಲಿ ಕಾಡು ಪ್ರಾಣಿಗಳ ಬೆದರಿಸಲು ಬೇರೆ ಬೇರೆ ವಿಧಾನಗಳಿದ್ದು, ಇಲ್ಲೂ ಕೂಡಾ ಅಂಥಹ ಪ್ರಯೋಗಗಳು ನಡೆಯಬೇಕಿದೆ ಎಂದು ಭಾ.ಕಿ.ಸಂ.ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ವಿ ಪೂಜಾರಿ ಅಭಿಪ್ರಾಯ ಪಟ್ಟರು.

ಉಡುಪಿ ಜಿಲ್ಲಾ ರೈತ ಸಂಘ, ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಸಮಿತಿ, ಭಾ.ಕಿ.ಸಂ.ಕುಂದಾಪುರ ಕ್ಷೇತ್ರ ಹಾಗೂ ಕೋಟೇಶ್ವರ ವಲಯ ಸಮಿತಿ ಸಹಭಾಗಿತ್ವದಲ್ಲಿ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಕೃಷಿಯ ಬಗ್ಗೆ ಹಿಮ್ಮುಖ ನೀತಿ ಆತಂಕ ಮೂಡಿಸುತ್ತಿದೆ. ಸರಿಯಾದ ಪ್ರೋತ್ಸಾಹ, ಧಾರಣೆ ಇಲ್ಲದಿರುವುದು ಕೂಡಾ ಇದಕ್ಕೆ ಕಾರಣ ಎಂದ ಅವರು, ಇವತ್ತು ಕೃಷಿಕರು, ಕೃಷಿಕಾರ್ಮಿಕರು ಮದ್ಯ ವ್ಯಸನಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಇವತ್ತು ಎಲ್ಲ ಕೆಟ್ಟ ಕೃತ್ಯಗಳ ಹಿಂದೆಯೂ ಮದ್ಯದ ಇರುತ್ತದೆ. ಈ ಬಗ್ಗೆ ಜಾಗೃತಿ ಕೃಷಿಕರಲ್ಲಿ ಬರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು ಆದ ಪ್ರತಾಪಚಂದ್ರ ಶೆಟ್ಟಿ ವಹಿಸಿದ್ದರು. ದ.ಕ, ಉಡುಪಿ ಜಿಲ್ಲೆ ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಹಿರಿಯ ತೋಟಗಾರಿಕಾ ನಿರ್ದೇಶಕ ಕೆ.ಪಿ.ಚಿದಂಬರ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಭಾಗದ ವಿಷಯ ತಜ್ಞ ಡಾ.ಎನ್.ಇ.ನವೀನ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಡಾ.ಚೈತನ್ಯ ಹೆಚ್.ಎಸ್., ಕೋಟೇಶ್ವರದ ಪ್ರಗತಿಪರ ಕೃಷಿಕ ಮಹಮ್ಮದ್ ರಫೀಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಭಾರತೀಯ ಕಿಸಾನ್ ಅಧ್ಯಕ್ಷ ಮೋಹನ ಆಚಾರ್ಯ ಸ್ವಾಗತಿಸಿ, ಶೇಷಗಿರಿ ಗೋಟ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರಿಕಾ ಪ್ರಾರ್ಥಿಸಿ, ಗುರುರಾಜ್ ಕಾರ್ಯಕ್ರಮ ನಿರ್ವಹಿಸಿದರು. ಕಾರ‍್ಯಾಗಾರದಲ್ಲಿ ಸಾವಯವ ಕೃಷಿ, ತೋಟಗಾರಿಕಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ, ತೋಟಗಾರಿಕಾ ಬೆಳೆಗಳ ಮಾರಾಟದ ಕುರಿತು ಮಾಹಿತಿ ನೀಡಲಾಯಿತು.

Exit mobile version