ಬೈಂದೂರು: ಸಮೀಪದ ನಾಗೂರು ಕುಸುಮ ಫೌಂಡೇಶನ್ ಆಶ್ರಯದಲ್ಲಿ ಅಲ್ಲಿನ ಲಲಿತ ಕೃಷ್ಣ ಕಲಾಮಂದಿರದಲ್ಲಿ ಬೈಂದೂರು ಶಿಕ್ಷಣ ವಲಯದ ಯುವಜನರಿಗಾಗಿ ಗಾನಕುಸುಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೀರ್ಪುಗಾರರಾಗಿದ್ದ ಬಸ್ರೂರು ಭಾಸ್ಕರ ಆಚಾರ್ಯ, ಕುಂದಾಪುರದ ಮೀರಾ ಕಾಮತ್, ಮೂಕಾಂಬಿಕಾ ಉಡುಪ, ಮಲ್ಪೆಯ ಸುದರ್ಶನ, ಗಂಗೊಳ್ಳಿಯ ಗಣೇಶ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಆಯೋಜಿಸಿದ್ದ ಕುಸುಮ ಫೌಂಡೇಶನ್‌ನ ಪ್ರಮುಖ ನಳಿನ್‌ಕುಮಾರ್ ಶೆಟ್ಟಿ ಸ್ವಾಗತಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಸಂಗೀತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಗಾನಕುಸುಮ ಕಾರ್ಯಕ್ರಮದ ಉದ್ದೇಶ. ಎರಡು ಅಥವಾ ಮೂರು ಸುತ್ತುಗಳಲ್ಲಿ ಆಯ್ಕೆ ನಡೆಸಿ ಅಂತಿಮವಾಗಿ ಹೊರಹೊಮ್ಮುವ 6 ಪ್ರತಿಭೆಗಳಿಗೆ ಮುಂದೆ ನಡೆಯುವ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ವೃತ್ತಿಪರ ಗಾಯಕರೊಂದಿಗೆ ಹಾಡುವ ಅವಕಾಶ ನೀಡಲಾಗುವುದು ಎಂದು ಹೇಳಿದರು.
ನಿರ್ದೇಶಕಿ ವಿದ್ಯಾ ಕಾರ್ಯಕ್ರಮದ ಮಾಹಿತಿ ನೀಡಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಪೂರ್ಣಿಮಾ ನಿರೂಪಿಸಿದರು. ಮೊದಲ ಸುತ್ತಿನಲ್ಲಿ 60 ಅಭ್ಯರ್ಥಿಗಳು ಭಾಗವಹಿಸಿದರು.