ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾಪಸ್ ಪಡೆದಿದೆ. ಇನ್ನು ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಆರ್ಬಿಐ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು. ಅವುಗಳನ್ನು 2023ರ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್ಗಳಲ್ಲಿ ಬದಲಾಯಿಸಿಕೊಳ್ಳಿ ಎಂದು ಆರ್ಬಿಐ ಪ್ರಕಟಣೆ ಮೂಲಕ ಸೂಚಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) 19 ಪ್ರಾದೇಶಿಕ ಕಚೇರಿಗಳು ಮತ್ತು ಇತರ ಬ್ಯಾಂಕುಗಳು ಮೇ 23 ರಿಂದ 2,000 ರೂ. ನೋಟುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತವೆ. ಅವು ಕಾನೂನುಬದ್ಧವಾದ ಟೆಂಡರ್ ಆಗಿರುತ್ತವೆ ಎಂದು RBI ತಿಳಿಸಿದೆ.
2016ರ ನ.9 ರಂದು ರಾತ್ರೋರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಮೌಲ್ಯದ 1,000 ಮತ್ತು 500 ನೋಟುಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಘೋಷಿಸಿದ್ದರು. ನಂತರ 2,000 ನೋಟು ಮುದ್ರಿಸಲು ಪ್ರಾರಂಭಿಸಲಾಗಿತ್ತು.
ವಿನಿಮಯ ಮಾಡಿಕೊಳ್ಳಬಹುದಾದ 2,000 ರೂ. ನೋಟುಗಳ ಮೊತ್ತಕ್ಕೆ ಮಿತಿ ಇದೆ. ಜನರು ಒಂದು ಬಾರಿಗೆ 20,000 ರೂ. ಮಿತಿಯಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಶೀಘ್ರದಲ್ಲೇ ಸ್ಥಗಿತಗೊಳ್ಳಲಿರುವ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ವ್ಯಕ್ತಿ ಬ್ಯಾಂಕ್ನ ಗ್ರಾಹಕರಾಗಿರಬೇಕೆಂದೇನಿಲ್ಲ. ಖಾತೆದಾರರಲ್ಲದವರು ಸಹ 2,000 ರೂ. ಮುಖಬೆಲೆ ನೋಟುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಮ್ಮೆಗೆ 20,000 ರೂ. ಮಿತಿಯವರೆಗೆ ಬದಲಾಯಿಸಬಹುದು.