ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುಂದರ ಬೈಂದೂರನ್ನು ಸಮೃದ್ಧ ಬೈಂದೂರನ್ನಾಗಿ ರೂಪಿಸಲು ಅಧಿಕಾರಿಗಳ ಸಹಕಾರ ಬಹುಮುಖ್ಯವಾಗಿದ್ದು, ಎಲ್ಲರೂ ಜೊತೆಯಾಗಿ ಹೊಸ ಕಲ್ಪನೆಯನ್ನು ಕಟ್ಟಿ ಬೈಂದೂರು ಅಭಿವೃದ್ಧಿಗೆ ಶ್ರಮಿಸಬೇಕಿದೆ. ಸಿಬ್ಬಂದಿ ಕೊರತೆ, ಅಧಿಕಾರ ವ್ಯಾಪ್ತಿಯನ್ನು ನೆಪವಾಗಿಸಿಕೊಂಡು ಅಭಿವೃದ್ಧಿಗೆ ಕುಂಠಿತವಾಗಲು ಬಿಡಬಾರದು. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ, ನಿಮ ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಬೆಳಕು ಚೆಲ್ಲುವ ಜವಾಬ್ದಾರಿ ನನ್ನದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.
ಅವರು ಬೈಂದೂರು ಪಟ್ಟಣ ಪಂಚಾಯತ್ ಕಛೇರಿಯಲ್ಲಿ ಶುಕ್ರವಾರ ಹಮಿಕೊಂಡಿದ್ದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಂದೂರು ವಿಧಾನಸಭಾ ಕ್ಷೇತ್ರ ನೈಸರ್ಗಿಕವಾಗಿ ಸಮೃದ್ಧವಾದ ಪ್ರದೇಶ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇದು ಮುಂದೆ ಆಗಬಾರದು. ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ಜೊತೆ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಆದ್ಯತೆ, ಆರೋಗ್ಯ, ನಿವೇಶನ, ಹಕ್ಕುಪತ್ರ, ಮೀನುಗಾರಿಕೆ, ಕೃಷಿ, ಪಶಸಂಗೋಪನೆಗೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದು, ಈ ಬಗ್ಗೆ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿ ಎಂದರು.
ಇಲಾಖೆಯಲ್ಲಿ ಸಿಬ್ಬಂಧಿ ಕೊರತೆ ಇರುವುದು, ಕೆಲವು ಮೂಲಭೂತ ಸಮಸ್ಯೆಗಳು ಒದಗಿಸದಿರುವುದು ಹಾಗೂ ನೂತನ ಬೈಂದೂರು ತಾಲೂಕಿಗೆ ಕೆಲವು ಕಛೇರಿಗಳು ಬಾರದಿರುವುದರ ಅರಿವಿದೆ. ಆದರೆ ಇದನ್ನೇ ನೆಪವಾಗಿಸಿಕೊಂಡು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಸರಿಯಲ್ಲ. ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದರು.
ಬೈಂದೂರು ಕಂದಾಯ ಇಲಾಖೆಯಲ್ಲಿ ಇಬ್ಬರು ತಹಶೀಲ್ದಾರರ ಗೊಂದಲದಿಂದಾಗಿ ಜನರಿಗೆ ತೀರಾ ಸಮಸ್ಯೆಯಾಗುತ್ತಿದ್ದು, ಈ ತಿಂಗಳೊಳಗೆ ಬಗೆಹರಿಯದಿದ್ದರೆ ನಾವು ಮುಂದಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಬೈಂದೂರು ಪಟ್ಟಣ ಪಂಚಾಯತ್ ಸಮಸ್ಯೆಗಳ ಆಗರವಾಗಿದ್ದು, ಬೈಂದೂರು ಕೇಂದ್ರಸ್ಥಾನದಲ್ಲಿಯೇ ಇಂತಹ ಪರಿಸ್ಥಿತಿ ಎದುರಾಗುವುದು ಸರಿಯಲ್ಲ. ತಕ್ಷಣ ಪರಿಹಾರ ದೊರಕಿಸದಿದ್ದರೆ ಬೇರೆಯದೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆ ನೀಗಿಸುವ ಜೊತೆಗೆ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪೋಷಕರಲ್ಲಿ ಆತವಿಶ್ವಾಸ ತುಂಬುವುದು ಕೂಡ ಮುಖ್ಯ. ಪೊಲೀಸರು ಯಾವ ಪಕ್ಷದ ಎಜೆಂಟರಂತೆ ವರ್ತಿಸದಿದ್ದರೇ ಬಹುಪಾಲು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸದರೆ ಮೀನುಗಾರರ ಬವಣೆ ತಪ್ಪಲಿದೆ. ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಡತ ವಿಲೇವಾರಿಗೆ ತಹಶೀಲ್ದಾರರು ವಿಶೇಷ ಮುತುವರ್ಜಿ ವಹಿಸಬೇಕಿದೆ. ಅರಣ್ಯ ಇಲಾಖೆ ಸಹಕಾರ ನೀಡಿದ ಬೈಂದೂರು ಭಾಗದ ಹಲವಾರು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕರು ಮಾತುಕಡೆ ನಡೆಸಿದರು.
ಸಮೃದ್ಧ ಬೈಂದೂರು ರೂಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಕ್ರಿಯಾಶೀಲತೆ ಬಹುಮುಖ್ಯವಾಗಿದ್ದು, ನಮ ಯೋಜನೆಗಳ ಜೊತೆಗೆ ನಿಮ್ಮ ಯೋಜನೆಗಳು ಇದ್ದರೆ ಒಂದಿಷ್ಟು ಉತ್ತಮ ಯೋಜನೆ ರೂಪುಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಸಲಹೆ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಸತೀಶ್, ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಬೈಂದೂರು ತಹಶೀಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ, ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.