Site icon Kundapra.com ಕುಂದಾಪ್ರ ಡಾಟ್ ಕಾಂ

ವಸತಿ ಶಾಲೆಯ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಖಾಸಗಿ ವಸತಿ ಶಾಲೆಯೊಂದರಲ್ಲಿ ಸೋಮವಾರ ಮುಂಜಾನೆ ವಿದ್ಯಾರ್ಥಿನಿಯೊಬ್ಬಳು ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರು ಮೂಲದ 9ನೇ ತರಗತಿ ವಿದ್ಯಾರ್ಥಿನಿ ತನ್ವಿ ಮೃತ ದುರ್ದೈವಿ.

ಬೆಂಗಳೂರು ನಿವಾಸಿಯಾದ ತನ್ವಿಯನ್ನು ಆಕೆಯ ಪೋಷಕರು ಎಪ್ರಿಲ್ ತಿಂಗಳಿನಲ್ಲಿ ಕುಂದಾಪುರದ ಖಾಸಗಿ ಶಾಲೆಯಲ್ಲಿ 9ನೇ ತರಗತಿಗೆ ಸೇರಿಸಿದ್ದರು. ವಸತಿ ಸಹಿತ ಶಾಲೆಯಾಗಿರುವುದರಿಂದ ಕಳೆದ ಎಪ್ರಿಲ್ನಿಂದ ಆಕೆ ಇಲ್ಲಿಯೇ ಇದ್ದಳು. ಪ್ರತಿದಿನ ಎಲ್ಲರಂತೆ ಚರುಕಾಗಿದ್ದ ತನ್ವಿ ಯೋಗಾಸನದ ಸಮವಸ್ತ್ರದಲ್ಲಿದ್ದವಳು ಸೋಮವಾರ ಬೆಳಿಗ್ಗೆ ಸುಮಾರು 5.45ಕ್ಕೆ ಶಾಲೆಯ ಎರಡನೇ ಮಹಡಿಯ ಕಿಟಕಿಯಿಂದ ಶಾಲಾ ಮೈದಾನಕ್ಕೆ ಬಿದ್ದಿದ್ದಾಳೆ. ಪರಿಣಾಮ ಆಕೆಯ ತಲೆ ನೆಲಕ್ಕೆ ಬಡಿದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯು ಬಾಲಕಿಯ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version