Kundapra.com ಕುಂದಾಪ್ರ ಡಾಟ್ ಕಾಂ

ಹೆಮ್ಮಾಡಿ ಜನತಾ ಪ್ರೌಢ ಶಾಲೆಯ ಶಿಕ್ಷಕ ಎಸ್. ದಿನಕರ್ ಅವರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತೇವೆ. 32ವರೆ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತಿ ಹೊಂದುತ್ತಿರುವ ವಿದ್ಯಾರ್ಥಿಸ್ನೇಹಿ ದಿನಕರ್ ಸರ್ ಅವರ ನಡೆ-ನುಡಿ ನಮಗೆಲ್ಲರಿಗೂ ಪ್ರೇರಣೆ. ಶಿಕ್ಷಕ ನಿವೃತ್ತಿಯಾಗುವುದು ವೃತ್ತಿಯಿಂದ ಮಾತ್ರ. ಆದರೆ ವಿದ್ಯಾರ್ಥಿಗಳ ಮನಸ್ಸಿಂದಲ್ಲ ಎಂದು ಪತ್ರಕರ್ತ ಶಶಿಧರ ಹೆಮ್ಮಾಡಿ ಹೇಳಿದರು.

ಅವರು ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ಜರುಗಿದ ಹಿರಿಯ ಶಿಕ್ಷಕ ಎಸ್ ದಿನಕರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮತನಾಡಿದರು.

ಬದುಕಿನಲ್ಲಿ ಸಮಾಜ ಪಾಠ ಬಹುಮುಖ್ಯವಾದುದು. ವೃತ್ತಿ ಜೀವನದೂದ್ದಕ್ಕೂ ಸಹಸ್ರಾರು ವಿದ್ಯಾರ್ಥಿಗಳಿಗೆ ಸಮಾಜ ಪಾಠ ಮಾಡಿದ ದಿನಾಕರ್ ಸರ್ ಎಂದಿಗೂ ವಿದ್ಯಾರ್ಥಿಗಳ ಮನಸ್ಸಲ್ಲಿ ಇರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಜನತಾ ಪ್ರೌಢ ಶಾಲೆ ಇಡೀ ತಾಲೂಕಿನಲ್ಲೇ ಮಹತ್ವದ ಸ್ಥಾನ ಪಡೆದಿದೆ. ಈ ಶಾಲೆ ಸಹಸ್ರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿಗೆ ಅಡಿಪಾಯ ಹಾಕಿಕೊಟ್ಟಿದೆ. ಎಸ್. ದಿನಾಕರ್ ಸರ್ ಅವರು ಈ ಶಾಲೆಯ ಭಾಗವಾಗಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ. ಈ ಶಾಲೆಯ ಪರಂಪರೆಯ ಕೊಂಡಿಯಾಗಿ ಅವರು ಕೆಲಸ ಮಾಡುವುದರ ಜೊತೆಗೆ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ ದಿನಾಕರ್ ಅವರು, ವೃತ್ತಿ ಜೀವನದೂದ್ದಕ್ಕೂ ಮಕ್ಕಳೊಂದಿಗೆ ಸ್ನೇಹಿತನಾಗಿ ಬೆರೆತಿದ್ದೇನೆ. ನನ್ನ ಸಹೋದ್ಯೋಗಿಗಳು ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯಬೇಡಿ ಮಕ್ಕಳು ದಾರಿ ತಪ್ಪುತ್ತಾರೆ ಎನ್ನುತ್ತಿದ್ದರು. ಆದರೆ, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರೆ ಮಾತ್ರ ಆ ಮಕ್ಕಳು ನಮ್ಮ ಮಾತನ್ನು ಕೇಳುತ್ತಾರೆ ಎನ್ನುವುದನ್ನು ಅರ್ಥೈಸಿಕೊಂಡಿದ್ದೇನೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಓರ್ವ ಶಿಕ್ಷಕನಿಗೆ ಪ್ರಜ್ಞಾವಂತ ನಾಗರಿಕನನ್ನು ಸೃಷ್ಠಿಸುವ ಶಕ್ತಿ ಇದೆ. ಓರ್ವ ಪ್ರಾಮಾಣಿಕ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಹೆಮ್ಮೆ ನನಗಿದೆ ಎಂದರು.

ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿವಿವಿ ಮಂಡಳಿ ನಿರ್ದೇಶಕರಾದ ರಘುರಾಮ್, ನಿವೃತ್ತ ಮುಖ್ಯೋಪಾಧ್ಯಾಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದಿ ದೇವಾಡಿಗ, ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ, ಬೈಂದೂರು ರತ್ತುಬೈ ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆನಂದ ಮದ್ದೋಡಿ, ಉದಯ ಕುಮಾರ್ ಹಟ್ಟಿಯಂಗಡಿ, ಹಳೆ ವಿದ್ಯಾರ್ಥಿ ಮಂಜುನಾಥ ಭಟ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಜು ಪೂಜಾರಿ ಕಾಳೂರಮನೆ, ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ಪೋಷಕ ಸಂಘದ ಪ್ರತಿನಿಧಿಗಳಾದ ಬಾಬು ಪೂಜಾರಿ, ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು.

ಸುದೀರ್ಘ 32ವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎಸ್ ದಿನಾಕರ್ ಅವರನ್ನು ಶಾಲಾ ವತಿಯಿಂದ ಹಾಗೂ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು.

ಶಿಕ್ಷಕರಾದ ವಿಠಲ ನಾಯ್ಕ್ ಸ್ವಾಗತಿಸಿದರು. ಶ್ರೀಧರ ಗಾಣಿಗ ಧನ್ಯವಾದವಿತ್ತರು. ಕನ್ನಡ ಶಿಕ್ಷಕ ಜಗದೀಶ್ ಶೆಟ್ಟಿ ನಿರೂಪಿಸಿದರು.

Exit mobile version