Kundapra.com ಕುಂದಾಪ್ರ ಡಾಟ್ ಕಾಂ

ಕುಡಿಯುವ ನೀರಿನ ಹೆಸರಿನಲ್ಲಿ ವಾರಾಹಿ ನೀರಾವರಿ ಯೋಜನೆ ಮುಗಿಸುವ ಹುನ್ನಾರ: ಕೆ. ಪ್ರತಾಪ್ಚಂದ್ರ ಶೆಟ್ಟಿ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜೂ.17:
ವಾರಾಹಿ ನೀರಾವರಿ ಯೋಜನೆಯನ್ನು ಆರಂಭಿಸಿರುವುದೇ ಕುಂದಾಪುರ ವಿಧಾನಸಭಾ ಕ್ಷೇತ್ರ, ಬೈಂದೂರು ಹಾಗೂ ಹಿಂದಿನ ಬಹ್ಮಾವರ ಕ್ಷೇತ್ರಗಳ ಕೃಷಿ ಭೂಮಿಗೆ ನೀರಾವರಿ ಒದಗಿಸುವುದಕ್ಕಾಗಿ. ಆದರೆ ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಬೇರೆ ಕಡೆಗಳಿಗೆ ವಾರಾಹಿ ಯೋಜನೆಯ ನೀರನ್ನೇ ಕೊಂಡೊಯ್ಯಲಾಗುತ್ತಿದೆ. ಕುಡಿಯುವ ನೀರು ಒದಗಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಇದರ ಹೆಸರಿನಲ್ಲಿ ವಾರಾಹಿ ಅಚ್ಚುಕಟ್ಟು ಪ್ರದೇಶದವರನ್ನು ನಿರ್ಲಕ್ಷಿಸಿದ್ದಲ್ಲದೇ, ವಾರಾಹಿ ನೀರಾವರಿ ಯೋಜನೆಯನ್ನೇ ಮುಗಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್ಚಂದ್ರ ಶೆಟ್ಟಿ ಆರೋಪಿಸಿದರು.

ಅವರು ಇಲ್ಲಿನ ಆರ್.ಎನ್. ಶೆಟ್ಟಿ ಮಿನಿ ಹಾಲ್ನಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಉಡುಪಿ, ಕಾರ್ಕಳ ಹಾಗೂ ಶಿವಪುರಕ್ಕೆ ಕುಡಿಯುವ ನೀರು ಪೂರೈಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ.

ಆದರೆ ವಾರಾಹಿ ಅಚ್ಚುಕಟ್ಟು ಪ್ರದೇಶದವರನ್ನು ನಿರ್ಲಕ್ಷಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಮೂಲ ಯೋಜನೆಯಲ್ಲಿದ್ದ ಮೂರನೇ ಒಂದಂಶವೂ ಇಲ್ಲಿ ಪೂರ್ಣಗೊಳ್ಳದೇ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯ ಮಾಡಲಾಗಿದೆ. ಕುಂದಾಪುರದಿಂದ ಉತ್ತರಕ್ಕೆ ಸ್ವರ್ಣ, ಮಡಿಸಾಲು, ಉದ್ಯಾವರ ಹೊಳೆ, ಸೀತಾ ನದಿ ಸಹಿತ 7 ಹೊಳೆಗಳಿವೆ. ಅಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ, ಉಡುಪಿ, ಕಾರ್ಕಳಕ್ಕೆ ಅಗತ್ಯವಿರುವ ನೀರು ಪೂರೈಸುವ ಸುಲಭ ಅವಕಾಶವಿದ್ದರೂ, ವಾರಾಹಿಯದ್ದೇ ನೀರು ಕೊಂಡೊಯ್ಯಬೇಕು ಎನ್ನುವ ನಿರ್ಧಾರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದರು.

ಕಂದಾಯ ಇಲಾಖೆಯಲ್ಲಿ ದೊಡ್ಡ ಕೊಟ್ಟವರಿಗೆ ಮಾತ್ರ ಕೆಲಸ ಎಂಬ ಸ್ಥಿತಿ ಇದೆ. ಎಲ್ಲಾ ದಾಖಲೆಗಳೂ ಸರಿ ಇದ್ದರೂ ರೈತರು, ಜನಸಾಮಾನ್ಯರ ಕೆಲಸ ಮಾಡಿಕೊಡಲು ಕೆಲವು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಅಕ್ರಮ ಸಕ್ರಮ, 94ಸಿ, ಡೀಮ್ಡ್ ಫಾರೆಸ್ಟ್ ಸಮಸ್ಯೆಗಳು ಹಾಗೆಯೇ ಇದೆ. ಇಲ್ಲಿರುವಷ್ಟು ಸಮಸ್ಯೆ ಬೇರೆ ಯಾವ ಇಲಾಖೆಯಲ್ಲಿಯೂ ಇಲ್ಲ. ಉಡುಪಿ ಜಿಲ್ಲಾ ರೈತ ಸಂಘವು ಸಮಸ್ಯೆ ಹೇಳಿ ಬರುವ ಸಾಮಾನ್ಯರ ನೆರವಿಗೆ ನಿಲ್ಲಲಿದೆ ಎಂದರು.

ವಾರಾಹಿ ಅವ್ಯವಹಾರದ ಬಗ್ಗೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆಸಿದ ವರದಿಯು ಈ ಹಿಂದಿನ ಕಾಂಗ್ರೆಸ್, ಸಮ್ಮಿಶ್ರ, ಬಿಜೆಪಿ ಸರಕಾರದ ಮುಂದೆ ಬಂದಿದೆ. ಈಗ ನಾಲ್ಕನೇ ಸರಕಾರದ ಮುಂದಿದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಸುರೇಶ್ ಶೆಟ್ಟಿ ಮಾತನಾಡಿ, ಬೆಳ್ಳಿ, ಆರ್ಡಿ, ಅಲ್ಪಾಡಿ ಭಾಗದಲ್ಲಿ 6-7 ಕಿಂಡಿ ಅಣೆಕಟ್ಟುಗಳಾದರೂ ಫೆಬ್ರವರಿಯಿಂದಲೇ ಅದರಲ್ಲಿ ನೀರಿಲ್ಲದ ಪರಿಸ್ಥಿತಿಯಿದೆ ಎಂದರು.

ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಮಾತನಾಡಿ, ಗುಲ್ವಾಡಿ ಕಿಂಡಿ ಅಣೆಕಟ್ಟು, ಸೌಕೂರು ಏತ ನೀರಾವರಿ ಯೋಜನೆಯಿಂದ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮುಖ್ಯವಾಗಿ ಗುಲ್ತಾಡಿ ಗ್ರಾಮವನ್ನೇ ನಿರ್ಲಕ್ಷಿಸಲಾಗಿದೆ. ಇಲ್ಲಿನ 50-60 ಎಕರೆ ಕೃಷಿಗೆ ನೀರೇ ಇಲ್ಲವಾಗಿದೆ ಎಂದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ ಶೆಟ್ಟಿ ಮಾತನಾಡಿ ಸಣ್ಣ ನೀರಾವರಿ ಇಲಾಖೆ ಎಲ್ಲೆಂದರಲ್ಲಿ ಹೊಳೆಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದೆ. ಅದರ ಸರಿಯಾದ ನಿರ್ವಹಣೆ ಇಲ್ಲದೇ ಬೇಸಿಗೆಯಲ್ಲಿ ನೀರು ಬರಿದಾಗುತ್ತದೆ. ಬೇರೆ ಸಂದರ್ಭದಲ್ಲಿ ಉಪ್ಪುನೀರು ಒಳಕ್ಕೆ ನುಗ್ಗುತ್ತಿದೆ. ಸಮರ್ಪಕ ನಿರ್ವಹಣೆ ಇಲ್ಲದೇ ರೈತರಿಗೆ ಉಪಕಾರ ಮಾಡಿದ್ದಕ್ಕಿಂತ ಉಪದ್ರವ ಮಾಡಿದ್ದೇ ಹೆಚ್ಚು. ಈ ಬಗ್ಗೆಯೂ ರೈತ ಸಂಘ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಡಾ| ಅತುಲ್ ಕುಮಾರ್ ಶೆಟ್ಟಿ ಮಾತನಾಡಿ ಮುಂದಿನ ದಿನಗಳಲ್ಲಿ ವಾರಾಹಿ ಅಥವಾ ಇನ್ನು ಯಾವುದೇ ಯೋಜನೆಯಿಂದ ಹೊಸೂರು, ಇಡೂರು, ಕೆರಾಡಿ, ಬೆಳ್ಳಾಲ ಗ್ರಾಮಗಳಿಗೂ ಅನುಕೂಲವಾಗಬೇಕು ಎಂದರು.

ಭಾರತೀಯ ಕಿಸಾನ್ ಸಂಘದ ಕುಂದಾಪುರ ವಲಯ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಮಾತನಾಡಿ, ಸೌಕೂರು ಏತ ನೀರಾವರಿ ಕೇವಲ 30% ಜನರಿಗೆ ಮಾತ್ರ ಅನುಕೂಲವಾಗುತ್ತಿದೆ. ಅಧಿಕಾರಿಗಳ ಮನಸ್ಸಿಗೆ ಬಂದಂತೆ ಯೋಜನೆ ಮುಂದುವರಿಸುತ್ತಿದ್ದಾರೆ. ಇಲಾಖೆಗೆ ಮನವರಿಕೆ ಮಾಡಿದರೂ ಸ್ಪಂದನೆ ಇಲ್ಲ ಎಂದರು.

ಕೆದೂರು ಸದಾನಂದ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆ ರೈತರಿಗೆ ನೆರವಾಗುವುದಕ್ಕಿಂತ ಹೆಚ್ಚಾಗಿ ಗುತ್ತಿಗೆದಾರ ಸ್ನೇಹಿಯಾಗಿದೆ. ಎಲ್ಲಿ ಏನು ಮಾಡಬೇಕು ಎಂಬುದನ್ನು ರೈತರು, ಅಧಿಕಾರಿಗಳು ಹೇಳುವ ಬದಲಾಗಿ ಗುತ್ತಿಗೆದಾರರಿಗೆ ಮನಬಂದಂತೆ ಯೋಜನೆ ಮುಂದುವರಿಯುತ್ತಿದೆ. ಆದರೆ ಲೋಪವೆಸುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸುವ ಕೆಲಸ ಮಾತ್ರ ಯಾರೂ ಮಾಡಿಲ್ಲ ಎಂದರು.

ಸತೀಶ್ ಅಡಿಗ ವಾರಾಹಿ ಉಪ ಕಾಲುವೆ ಸಮಸ್ಯೆಯಿಂದ ಮಾತನಾಡಿ, ಯಡಾಡಿ ಮತ್ಯಾಡಿ ಗ್ರಾಮದ ಸುಮಾರು 20 ಮನೆಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಉಡುಪಿ ಜಿಲ್ಲಾ ರೈತ ಸಂಘದ ಪ್ರಮುಖರಾದ ಸತೀಶ್ ಕಿಣಿ ಬೆಳ್ವೆ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕೆದೂರು ಕರುಣಾಕರ ಶೆಟ್ಟಿ, ಸುಧಾಕರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಬಾಬು ಹೆಗ್ಡೆ, ಕೃಷ್ಣದೇವ ಕಾರಂತ್ ಕೋಣಿ ಉದಯ ಕುಮಾರ್ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರದೀಪ್ ಬಲ್ಲಾಳ್, ವಿಕಾಸ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Exit mobile version