Kundapra.com ಕುಂದಾಪ್ರ ಡಾಟ್ ಕಾಂ

ಅಮೇರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರಿಗೆ ಕುಂದಾಪುರದ ಹೋಟೆಲ್ ಉದ್ಯಮಿಯ ಆತಿಥ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಮೆರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಊಟೋಪಚಾರದ ಆತಿಥ್ಯ ನಿರ್ವಹಿಸಿದ ಆಲೂರು ಮೂಲದ ಅನಿವಾಸಿ ಭಾರತೀಯ, ವುಡ್‌ಲ್ಯಾಂಡ್ಸ್ ಹೋಟೆಲ್ ಮಾಲೀಕ ಆನಂದ ಪೂಜಾರಿ, ಅತಿಥ್ಯೋದ್ಯಮದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಅಮೇರಿಕಾ ಪ್ರವಾಸ ಕೈಗೊಂಡಾಗಲೆಲ್ಲಾ ಆನಂದ ಪೂಜಾರಿ ಅವರಿಗೆ ಆತಿಥ್ಯದ ಜವಾಬ್ದಾರಿ ದೊರೆತಿದೆ. ವಾಷಿಂಗ್ಟನ್ ಡಿಸಿಯಲ್ಲಿ ಅವರು 3ನೇ ಬಾರಿಗೆ ಮೋದಿಯವರಿಗೆ ಆತಿಥ್ಯ ನೀಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿಯೇ ವುಡ್‌ಲ್ಯಾಂಡ್ಸ್ ಪ್ಯೂರ್ ವೆಜಿಟೇರಿಯನ್ ಇಂಡಿಯನ್ ಕ್ಯೂಸಿನ್ ನಡೆಸುತ್ತಿರುವ ಅವರು, ಜ್ಯುವಲ್ಸ್ ಆಫ್ ಇಂಡಿಯಾ ಎಂಬ ರೆಸ್ಟೋರೆಂಟ್ ಕೂಡ ಹೊಂದಿದ್ದು, ಇವರ ಹೋಟೆಲ್‌ಗಳಲ್ಲಿ ತಯಾರಾಗುವ ಭಾರತೀಯ ಖಾದ್ಯಗಳು ಅಮೆರಿಕನ್ನರಿಗೂ ಅಚ್ಚುಮೆಚ್ಚು.

ಇದನ್ನೂ ಓದಿ: ಕುಂದಾಪ್ರ ಡಾಟ್ ಕಾಂ ಪ್ರಸ್ತುತಿಯ ’ವಿಷನ್ ಬೈಂದೂರು 2033’ ಕಾರ್ಯಕ್ರಮ ಉದ್ಘಾಟನೆ – https://kundapraa.com/?p=67337 .

ಆನಂದ್ ಪೂಜಾರಿ ಮತ್ತು ಸುಮಿತಾ ದಂಪತಿ

ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿಮನೆ ನಿವಾಸಿ ಬಡಿಯ ಪೂಜಾರಿ ಮತ್ತು ಗಿರಿಜಾ ಪೂಜಾರಿ ದಂಪತಿ ಪುತ್ರರಾದ ಆನಂದ ಅವರು, ವಾಷಿಂಗ್ಟನ್ ಡಿಸಿಯಲ್ಲಿ ತನ್ನ ಕುಟುಂಬದೊಂದಿಗೆ ಕಳೆದ ಎರಡುವರೆ ದಶಕಗಳಿಂದ ನೆಲೆಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಅಮೇರಿಕಾ ಪ್ರವಾಸ ಕೈಗೊಂಡ ಸಂದರ್ಭ ಆನಂದ್ ಪೂಜಾರಿ ಮತ್ತು ಸುಮಿತಾ ದಂಪತಿಗಳು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಾಷಿಂಗ್ಟನ್ ಡಿಸಿಗೆ ಬರುವ ಕೇಂದ್ರ ಸಚಿವರು, ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಭಾರತದ ಗಣ್ಯರಿಗೆ ಆತಿಥ್ಯದ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದಾರೆ.

ಈ ಬಾರಿ ಶ್ವೇತಭವನದ ಸೌತ್ಲಾನ್ ನಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಗಣ್ಯ ಆಹ್ವಾನಿತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಆನಂದ್ ಪೂಜಾರಿ ಮತ್ತು ಸುಮಿತಾ ದಂಪತಿ ವಿಶೇಷ ಮುತುವರ್ಜಿ ವಹಿಸಿ ವಿಶೇಷ ಸಸ್ಯಾಹಾರ ಖಾದ್ಯಗಳನ್ನು ತಯಾರಿಸಿದ್ದರು. 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾದ್ದರಿಂದ ಮೊದಲ ದಿನ ರಾತ್ರಿ ಊಟಕ್ಕೆ ಸಿರಿಧಾನ್ಯಗಳ ಬಿಸಿ ಬೇಳೆ ಬಾತ್ ಮಾಡಿದ್ದರು. ಉಳಿದಂತೆ ಮೋದಿಯವರಿಗೆ ಪ್ರಿಯವಾಗಿರುವ ಗುಜರಾತಿ ಶೈಲಿಯ ಕಿಚಡಿ, ಡೋಕ್ಲಾ, ಹಸಿ ಮತ್ತು ಬೇಯಿಸಿದ ತಾಜಾ ತರಕಾರಿಗಳೂ, ಹಣ್ಣುಗಳು ಇತ್ಯಾದಿ, ದಕ್ಷಿಣ ಭಾರತದ ವಿಶೇಷಗಳಾದ ಇಡ್ಲಿ, ಚಟ್ನಿ, ವಡೆ- ಸಾಂಬಾರ್ ಸಹ ಒದಗಿಸಿದ್ದಾರೆ.

* ಪ್ರಧಾನಿ ಮೋದಿ ಎಲ್ಲೇ ಹೋದರೂ ಸಹಜವಾಗಿಯೇ ಭಾರತೀಯ ತಿನಿಸುಗಳನ್ನು ಇಷ್ಟಪಡುತ್ತಾರೆ. ಉತ್ತರ ಭಾರತದ ಶೈಲಿಯ ಊಟವನ್ನು ಇಷ್ಟಪಡುತ್ತಾರಾದರೂ ಬೆಳಗ್ಗಿನ ಉಪಾಹಾರದ ವೇಳೆ ಮಾತ್ರ ಅವರಿಗೆ ದಕ್ಷಿಣ ಭಾರತದ ಇಡ್ಲಿ ಸಾಂಬಾರ್ ಎಂದರೆ ಅಚ್ಚುಮೆಚ್ಚು. ಬೆಳಗ್ಗೆ ಸಾಮಾನ್ಯವಾಗಿ ಇಡ್ಲಿ, ವಡೆ, ಸಾಂಬಾರ್ ಜೊತೆಗೆ ಉಪ್ಪಿಟ್ಟು ಸೇವಿಸುವ ಅವರು ದಿನಕ್ಕೆ ಮೂರ್ನಾಲ್ಕು ಬಾರಿ ಮಸಾಲೆ ಚಹಾ ಸೇವಿಸುತ್ತಾರೆ – ಆನಂದ್ ಪೂಜಾರಿ, ವುಡ್‌ಲ್ಯಾಂಡ್ಸ್ ಹೋಟೆಲ್ ಪ್ಯೂರ್ ವೆಜ್ ಇಂಡಿಯನ್ ಕ್ಯೂಸಿನ್, ವಾಷಿಂಗ್ಟನ್ ಡಿಸಿ

Exit mobile version