Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸ್ನೇಹಿತನಿಂದಲೇ 22.56 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಜೊತೆಗಿದ್ದ ಸ್ನೇಹಿತನೇ ಕಳ್ಳತನ ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಅತ್ತಾವರ ನಿವಾಸಿ, ಮೂಲತಃ ರಾಜಸ್ಥಾನದವರಾದ ರಮೇಶ್ ಕುಮಾರ್ (26) ಹಾಜಿ ಗೋಲ್ಡ್ ಎಂಡ್ ಡೈಮಂಡ್ಸ್ ಜುವೆಲ್ಲರಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜೂ.10 ರಂದು 421.380 ಮಿಲಿ ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಜಿ ಗೋಲ್ಡ್ ಎಂಡ್ ಡೈಮೆಂಡ್ ಶಾಪ್ನಿಂದ ಮಾರಾಟ ಮಾಡಲು ಹೊರಟಿದ್ದರು. ಈ ವೇಳೆ ಮಧ್ಯಾಹ್ನ 12:00 ಗಂಟೆಗೆ ತನ್ನ ಸ್ನೇಹಿತರಾದ ರಾಜಸ್ಥಾನದ ಪಾಲಿ ಜಿಲ್ಲೆಯ ರಾಮ್ ಎಂಬಾತ ಮಂಗಳೂರಿನ ಪಂಪ್ವೇಲ್ ಬಳಿ ಸಿಕ್ಕಿದ್ದು ಇಬ್ಬರೂ ಕೂಡ ಜೊತೆಯಲ್ಲಿ ಬಸ್ಸಿನಲ್ಲಿ ಹೊರಟು ಸಂಜೆ 04-30 ಗಂಟೆಗೆ ಉಪ್ಪುಂದದ ಅಶೋಕ್ ಜ್ಯುವೆಲ್ಲರಿಗೆ ಹೋಗಿ 14 ಗ್ರಾಂ ಚಿನ್ನಾಭರಣ ಮಾರಾಟ ಮಾಡಿ ಅಲ್ಲಿಂದ 14 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ವಾಪಸು ಮಂಗಳೂರಿಗೆ ಹೊರಟಿದ್ದರು.

ಕುಂದಾಪುರ ತಲುಪುವಾಗ ಸಂಜೆ 07-00 ಗಂಟೆ ಆದ್ದರಿಂದ ರಮೇಶ್ ಕುಮಾರ್ ಹಾಗೂ ಅವರ ಸ್ನೇಹಿತ ರಾಮ್ ಕುಂದಾಪುರದ ಖಾಸಗಿ ಹೊಟೇಲ್ ಒಂದರಲ್ಲಿ ಉಳಿದ್ದುಕೊಂಡಿದ್ದು, ರಮೇಶ್ ಅವರು ಮಂಚದ ಬಳಿ ಚಿನ್ನಾಭರಣ ಇರುವ ಬ್ಯಾಗ್ ಇಟ್ಟು ಮಲಗಿದ್ದರು. ಜೂ.11 ರಂದು ಬೆಳಗ್ಗಿನ ಜಾವ 03-00 ಗಂಟೆ ಸುಮಾರಿಗೆ ರಮೇಶ್ ಕುಮಾರ್ ನೀರು ಕುಡಿಯಲು ಎದ್ದಾಗ ಜೊತೆಗಿದ್ದ ರಾಮ್ ರೂಮ್ ನಲ್ಲಿ ಇರಲಿಲ್ಲ. ಸಂಶಯಗೊಂಡು ಚಿನ್ನಾಭರಣದ ಬ್ಯಾಗ್ ಅನ್ನು ಪರಿಶೀಲಿಸಿದಾಗ ಕಳ್ಳತನ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ರೂಮಿನ ಬಾಗಿಲನ್ನು ಹೊರಗಿನಿಂದ ಚಿಲಕ ಹಾಕಿತ್ತು

ಕಳುವಾದ ಚಿನ್ನಾಭರಣಗಳಾದ 1) ಚಿನ್ನದ ಸಾನಿಯಾ ಬಾಲಿ 43 ಜೊತೆ (52.200 ಗ್ರಾಂ), 2) ಚಿನ್ನದ ಮೂಗುತಿ 153 ಫೀಸ್ ( 61.500 ಗ್ರಾಂ), 3) ಚಿನ್ನದ ಜೆ ಬಾಲಿ -44 ಫೀಸ್ (61.910 ಗ್ರಾಂ), 4) ಚಿನ್ನದ ಕಿವಿಯೋಲೆ-158 ಜೊತೆ (150.750 ಗ್ರಾಂ), 5) ಕಿವಿಯ ಚಿನ್ನದ ಟಾಪ್ಸ್ 60 ಜೊತೆ (81.020 ಗ್ರಾಂ) 6) 14 ಗ್ರಾಂ ಚಿನ್ನದ ಗಟ್ಟಿ ಆಗಿದ್ದು ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22,56,000/- ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Exit mobile version