Kundapra.com ಕುಂದಾಪ್ರ ಡಾಟ್ ಕಾಂ

ಸಂಗೀತದಿಂದ ಸಂಸ್ಕಾರ ಪ್ರಾಪ್ತಿ – ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಡಾ. ಗೋಪಾಲಕೃಷ್ಣ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾದಕ್ಕೆ ಎಲ್ಲ ಜೀವಿಗಳ ಮೇಲೂ ಧನಾತ್ಮಕ ಪರಿಣಾಮ ಬೀರುವ ಶಕ್ತಿ ಇದೆ. ಭಾರತೀಯ ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಶ್ರವಣದಿಂದ ಮನುಷ್ಯರಿಗೆ ವಿಶೇಷವಾದ ಅನುಭೂತಿ ಸಿದ್ಧಿಸುವುದರ ಜತೆಗೆ ಅವರ ಹೃದಯ ಸಂಸ್ಕಾರಗೊಳ್ಳುತ್ತದೆ ಎಂದು ಕೊಲ್ಲೂರಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಭಟ್ ಹೇಳಿದರು.

ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಕುಂದಾಪುರದ ಗುರುಪರಂಪರಾ ಸಂಗೀತಸಭಾ ಆಶ್ರ್ರಯದಲ್ಲಿ ಭಾನುವಾರ ನಡೆದ ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮದಲ್ಲಿ. ಅವರು ಗೌರವ ಅತಿಥಿಯಾಗಿದ್ದರು.

ಭಾರತೀಯ ಸಂಗೀತ ಪ್ರಕಾರಗಳು ಶಾಸ್ರ್ತಾಧಾರಿತವಾದುವುಗಳು. ಅವುಗಳನ್ನು ವೇದಗಳೊಂದಿಗೆ ಸಮೀಕರಿಸಲಾಗುತ್ತದೆ. ಅವುಗಳ ಅಧ್ಯಯನಕ್ಕೆ ಶಿಸ್ತು, ಸಂಯಮ, ಸಮರ್ಪಣಾಭಾವ ಮತ್ತು ತನ್ಮಯತೆ ಅಗತ್ಯ. ನಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಯಾವುದಾದರೊಂದು ಸಂಗೀತ ಪ್ರಕಾರದ ಅಧ್ಯಯನದಲ್ಲಿ ತೊಡಗಿಸುವುದರಿಂದ ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ಅವರು ಹೇಳಿದರು.

ನೇಹಾ ಹೊಳ್ಳ ಸ್ವಾಗತಿಸಿದರು. ಸಾತ್ಯಕಿ ವಂದಿಸಿದರು. ಸಭ್ಯಾ ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಗೋವಿಂದ ಅಡಿಗ, ಕೋಟದ ಶಿಕ್ಷಕ ಶಂಭು ಭಟ್, ಲೇಖಕಿ ನರ್ಮದಾ ಪ್ರಭು ಇದ್ದರು.

ಗುರುಪರಂಪರಾ ಸಂಗೀತಸಭಾದ ವಿದ್ಯಾರ್ಥಿಗಳು ವಿದ್ವಾನ್ ಸತೀಶ ಭಟ್ ಮತ್ತು ವಿದುಷಿ ಪ್ರತಿಮಾ ಭಟ್ ದಂಪತಿಗೆ ಗುರುವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಅಭಿರಾಮ, ಪ್ರಾಂಜಲಿ ಭಟ್, ಅದಿತಿ ಭಂಡಾರ್ಕಾರ್, ವಂಶಿಕಾ ಪ್ರಭು, ಕೇದಾರ ಮರವಂತೆ, ಸಾತ್ಯಕಿ, ವೀಣಾ ನಾಯಕ್, ಸೋನಿಯಾ, ಪಂಚಮಿ, ಮೇದಿನಿ ಶೆಟ್ಟಿ, ನಾಗರಾಜ ಭಟ್, ಈಶ್ವರಿ ಶೇಟ್, ಶಮಾ ಸೋಮಯಾಜಿ, ಸುಧಾ ಭಟ್, ನೇಹಾ ಹೊಳ್ಳ, ಸಂಕಲ್ಪಕುಮಾರ ಗುರುಗಳಿಗೆ ಗೀತವಂದನೆ ಸಲ್ಲಿಸಿದರು. ಗುರು ಸತೀಶ ಭಟ್ ಸಂಗೀತ ಕಚೇರಿ ನಡೆಸಿಕೊಟ್ಟರು. ಶಶಿಕಿರಣ ಮಣಿಪಾಲ್, ಗಣಪತಿ ಹೆಗಡೆ ಹರಿಕೇರಿ, ಅಜಯ್ ಹೆಗಡೆ ವರ್ಗಾಸುರ ಸಹವಾದನ ನೀಡಿದರು.

Exit mobile version