ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜು.೦4: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜುಲೈ 05ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಳೆದೆರಡು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ರೆಡ್ ಹಾಗೂ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೊದಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಮಳೆಯ ಪ್ರಮಾಣ ಹಾಗೂ ವಿಪತ್ತು ಪರಿಸ್ಥಿತಿಯನ್ನು ಆಧರಿಸಿ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ತಹಶಿಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದರು. ಆದರೆ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಜಿಲ್ಲಾಧಿಕಾರಿಗಳು ರಾತ್ರಿ 9:45ರ ಬಳಿಕ ರಜೆ ಘೋಷಿಸಿದ್ದು, ರಾತ್ರಿ 12:20ಕ್ಕೆ ಆದೇಶ ಪ್ರತಿ ಹೊರಡಿಸಿದ್ದರು.
ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದ್ದು, ಪದವಿ ಕಾಲೇಜುಗಳಲ್ಲಿ ರಜೆ ಘೋಷಣೆ ಮಾಡಲಾಗಿಲ್ಲ. ಆದರೆ ಪದವಿ ಶಿಕ್ಷಣ ಸಂಸ್ಥೆಗಳು ಮಳೆ ವಿಪತ್ತು ಸಂದರ್ಭ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ವಿದ್ಯಾರ್ಥಿಗಳು ತೋಡು ಹಳ್ಳ ದಾಟಿ ಬರುವುದಿದ್ದರೆ ಮನೆಯಲ್ಲಿಯೇ ಉಳಿಯಲು ಸೂಚಿಸುವುದು, ಶಿಥಿಲ ಕಟ್ಟಡವನ್ನು ತರಗತಿ ನಡೆಸಲು ಬಳಸದಿರುವುದು, ನೆರೆ ಪೀಡಿತ ಪ್ರದೇಶದಲ್ಲಿ ಸ್ಥಳೀಯ ರಜೆ ಘೋಷಿಸುವುದು ಹಾಗೂ ರಜೆ ಅವಧಿಯನ್ನು ಶನಿವಾರ ಅಥವಾ ಭಾನುವಾರ ಹೆಚ್ಚುವರಿ ತರಗತಿ ನೀಡಿ ಸರಿದೂಗಿಸುವುದು, ವಾಹನ ಸುರಕ್ಷತೆ ನೋಡಿಕೊಳ್ಳುವುದು ಹಾಗೂ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡುವುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ ಆದೇಶದಲ್ಲಿ ತಿಳಿಸಿದ್ದಾರೆ.
[ಗಮನಿಸಿ: ಕಳೆದ ವರ್ಷ (2022) ಜು.06ರಂದು ಜಿಲ್ಲಾಧಿಕಾರಿಗಳು ರಜೆ ಘೋಷಿಸಿರುವ ಸುದ್ದಿ ಕುಂದಾಪ್ರ ಡಾಟ್ ಕಾಂನಲ್ಲಿ ಪ್ರಕಟಗೊಂಡಿದ್ದು, ಅದನ್ನು ಈಗ ಶೇರ್ ಮಾಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಲಾಗುತ್ತಿದೆ. ಇದು ಮುಂದುವರಿಯುವುದು ಕಂಡುಬಂದರೆ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವುದು]
