ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಮಾಜಿಕ ಜೀವನದಲ್ಲಿ ಸಂಘಟನೆ ಅತ್ಯಗತ್ಯ. ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಸಮಾನ ಮನಸ್ಕ ಸದಸ್ಯರು ಮುಖ್ಯವಾಗಿರಬೇಕು. ಅವರೆಲ್ಲರ ಸತ್ಚಿಂತನೆಗಳ ಜತೆಗೆ ಆಸಕ್ತಿ ಹಾಗೂ ಛಲವಿದ್ದರೆ ಅಸಾಧ್ಯವೆಂಬುವುದು ಯಾವುದೂ ಇಲ್ಲ ಎಂದು ಕಾಲ್ತೋಡು ಸರ್ಕಾರಿ ಆಯುರ್ವೇದ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಹೇಳಿದರು.
ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆದ ಇನ್ನರ್ವೀಲ್ ಕ್ಲಬ್ನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ ಪರಸ್ಪರ ಗೆಳೆತನದಿಂದ ಕೂಡಿ ಬಾಳುವ ಒಂದು ಕುಟುಂಬದಂತಿರುವ ಇನ್ನರ್‌ವೀಲ್ ಕ್ಲಬ್ನಲ್ಲಿ ಎಲ್ಲಾ ಸಹೋದರಿಯರು ಸಂಘಟಿತರಾಗಿ ಊರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡುವಂತಾದಾಗ ಮಾತ್ರ ಶತ್ರುತ್ವ ಮರೆಯಾಗಿ ಕತ್ತಲೆಯ ಒಳಗಿರುವ ಜ್ಞಾನ, ಭರವಸೆಗಳೆಂಬ ಬೆಳಕಿನ ಬೀಜದಂತೆ ಭವಿಷ್ಯದ ಬಾಳು ಬೆಳಗುತ್ತದೆ. ಮಹಿಳೆಯರ ರಕ್ಷಣೆಯ ಬಗ್ಗೆ ಅಲ್ಲಲ್ಲಿ ಜಾಗೃತಿ ಸಮಾವೇಶ, ಕಷ್ಟದಲ್ಲಿರುವವರಿಗೆ, ನೊಂದವರಿಗೆ ತಕ್ಷಣ ಸ್ಪಂದಿಸುವ ಹಾಗೂ ಮಕ್ಕಳಿಗೆ ಪ್ರಕೃತಿ ರಕ್ಷಣೆ, ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮತ್ತು ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುವ ಶೈಕ್ಷಣಿಕ ಕಾರ್ಯಕ್ರಮ ನಡೆಸುವ ಮೂಲಕ ಮಾನವೀಯತೆಯ ಸೇವೆ ನಿಮ್ಮಿಂದಾಗಲಿ ಎಂದು ಶುಭಹಾರೈಸಿದರು.
ನೂತನ ಅಧ್ಯಕ್ಷೆ ಚಂದ್ರಿಕಾ ರಾಮು ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಪಡೆದ ವರ್ಷಿತ ಇವರಿಗೆ ನಗದು ಪುರಸ್ಕಾರ ನೀಡಲಾಯಿತು.
ಸುಜಾತಾ ರಾವ್ ಸಂಪಾದಕತ್ವ ಬುಲೆಟಿನ್ ಅನ್ನು ರೋಟರಿ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು ಬಿಡುಗಡೆಗೊಳಿಸಿದರು. ಐವರು ನೂತನ ಸದಸ್ಯರು ಕ್ಲಬ್ಬಿಗೆ ಸೇರ್ಪಡೆಗೊಂಡರು.
ನಿರ್ಗಮನ ಅಧ್ಯಕ್ಷೆ ಭಾನುಮತಿ ಬಿ. ಕೆ. ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಪಿಂಕಿ ಮೋಬಿ ಕರ್ವಾಲೊ ವಾರ್ಷಿಕ ವರದಿ ಹಾಗೂ ನೂತನ ಕಾರ್ಯದರ್ಶಿ ಮಾನಸ ರಾವ್ ಸಂದೇಶ ವಾಚಿಸಿದರು. ಚೈತ್ರಾ ಯಡ್ತರೆ ನಿರೂಪಿಸಿ, ಆಶಾ ಕಿಶೋರ್ ವಂದಿಸಿದರು.