Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಹಳೆ ವಿದ್ಯಾರ್ಥಿ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅತ್ಯುತ್ತಮವಾಗಿ ಪ್ರತಿಭೆಯನ್ನು ತೋರ್ಪಡಿಸುವತಂಹ ವಿದ್ಯಾರ್ಥಿಗಳಿಗೆ ಸಮಾಜ ಮೆರವಣಿಗೆ ಮಾಡುತ್ತದೆ. ಸೊಮಾರಿಗಳಾಗಿ ಎಲ್ಲೋ ಮೂಲೆಯಲ್ಲಿ ಕುಳಿತರೇ ನಿಮ್ಮನ್ನು ಈ ಸಮಾಜ ಗುರುತಿಸುವುದಿಲ್ಲ ಎಂದು ಶಾಲಾ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಹೇಳಿದರು.

ಅವರು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಶುಕ್ರವಾರ ಹಳೇ ವಿದ್ಯಾರ್ಥಿ ಸಂಘದಿಂದ ಜರುಗಿದ ’ಸ್ನೇಹ ಸಂಗಮ’ ಕಾರ್ಯಕ್ರಮದಲ್ಲಿ ಕಳೆದ ಬಾರಿಯ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹತ್ತನೇ ವರ್ಷದ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಿಕೆ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರ ಯಾವುದಾದರಲ್ಲಿ ಕೂಡ ನಾವು ಪ್ರತಿಭಾವಂತರಾದರೇ ನಮ್ಮನ್ನು ಹೊತ್ತು ಮೆರವಣಿಗೆ ಮಾಡುವ ವಿವಿಧ ಸಂಸ್ಥೆಗಳು ಈ ಸಮಾಜದಲ್ಲಿವೆ. ಸಂಘಟನೆಯ ಆರಂಭ ಮಾಡುವುದು ಸುಲಭ ಅದನ್ನು ಮುನ್ನೆಡೆಸಿಕೊಂಡು ಹೋಗುವುದು ಬಹಳ ಕಠಿಣ. ಇತಂಹ ದುರ್ಗಮ ಪರಿಸ್ಥಿತಿಯಲ್ಲೂ ಕೂಡ ಈ ಕಾರ್ಯ ಮುಂದುವರೆಸಿಕೊಂಡು ಬಂದಿರುವುದರ ಜೊತೆಗೆ ಈ ಶಾಲೆಯಲ್ಲಿ ಕಲಿತು ಸಮಾಜದಲ್ಲಿ ಪಡೆದಕೊಂಡಿರುವುದನ್ನ ಸಮಾಜಕ್ಕೆ ಹಿಂದಿರುಗಿಸಿದ ಸ್ನೇಹ ಸಂಗಮದ ಕಾರ್ಯ ಶ್ಲಾಘನೀಯ ಎಂದರು.

ಹಿರಿಯ ಶಿಕ್ಷಕ ಪ್ರದೀಪ್ ಶಾನುಭೋಗ್, ಎಸ್.ಡಿ.ಎಂ.ಸಿ ಸದಸ್ಯ ನಾರಾಯಣ ಬಂಗೇರ, ಸ್ನೇಹ ಸಂಗಮದ ಮುಖ್ಯಸ್ಥರಾದ ಗಿರೀಶ್, ರವಿ ದೇವಾಡಿಗ, ಸಂತೋಷಕುಮಾರ್ ಬಿ.ಎಸ್, ಯೋಗಿಶ್ ದೇವಾಡಿಗ, ರಾಘವೇಂದ್ರ ಎಸ್ ಬೀಜಾಡಿ ಉಪಸ್ಥಿತರಿದ್ದರು.

ಶಿಕ್ಷಕ ಶ್ರೀಕಾಂತ್ ಸ್ವಾಗತಿಸಿದರು, ಶಿಕ್ಷಕಿ ಪೀತಾಂಬರಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಉದಯ ಮಡಿವಾಳ ಎಂ ನಿರೂಪಿಸಿದರು.

Exit mobile version