Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ: ವಿಶ್ವ ಕುಂದಾಪ್ರ ಕನ್ನಡ ದಿನ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪ್ರ ಕನ್ನಡದ್ ತಾಕತ್ತೇ ಅಂತದ್ ಕಾಣಿ. ಅದ್ರೊಳಗ್ ಭಾವ-ಬಂಧ ಎರಡೂ ಇತ್ತ್. ಹಂಗಾಯೇ ಕುಂದಾಪ್ರ ಭಾಷಿ ಮಾತಾಡ್ವರ್ ಯಾರ್ ಯಾರ್ ಎಲ್ಲೆಲ್ಲಿದ್ರೋ ಅಲ್ಲಲ್ಲೇ ಭಾಷಿ ಉಳ್ಸಿ-ಬೆಳ್ಸು ಬಗ್ಗ್ ಒಂಚೂರಾರೂ ನಿಗಾ ವಯ್ಸ್ಲಿ ಅಂದೇಳಿ ಆಟಿ ಅಮಾಸಿ ದಿನವೇ ’ವಿಶ್ವ ಕುಂದಾಪ್ರ ಕನ್ನಡ ದಿನ ‘ ಅಂದೇಳಿ ಆಚರಿಸ್ತಿದ್ರ್

ಈ ಸರ್ತಿ ಊರಂಗೆ, ಪರೂರಂಗೆ ಬೇರ್ಬೇರೆ ಕಾರ್ಯಕ್ರಮ ಆತಿತ್ತ್. ಬ್ರಹ್ಮಾವರದಿಂದ ಹಿಡ್ದ್ ಶಿರೂರ್ ತನಕ, ಕಾರ್ಕಳ, ಹೆಬ್ರಿ, ಬೆಂಗಳೂರು, ಧಾರವಾಡದಂಗೂ ಕಾರ್ಯಕ್ರಮ ಮಾಡ್ತಿದ್ರ್. ಊರಂಗ್ ಕಾರ್ಯಕ್ರಮ ಮಾಡುದ್ ಒಂದ್ ನಮ್ನಿ. ಆರೆ ಪರೂರಂಗ್ ಇಪ್ಪು ಕುಂದಾಪ್ರ ಕನ್ನಡ ಮಾತಾಡ್ವರೆಲ್ಲಾ ಒಟ್ಟಾಯಿ ಕಾರ್ಯಕ್ರಮ ಮಾಡುದ್ ಸಣ್ಣಾಟದ್ ಮಾತಲ್ಲ ಕಾಣಿ. ಅಂದಂಗೆ ಕುಂದಾಪ್ರ ಡಾಟ್‌ ಕಾಂ ಬಳಗದವ್ರೂ ವರ್ಷಂಪ್ರತಿ ಕಾರ್ಯಕ್ರಮ ಮಾಡ್ತ್ರ್.

ವಿಶ್ವ ಕುಂದಾಪ್ರ ಕನ್ನಡ ದಿನ:
ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಕನ್ನಡ ಭಾಷೆಯ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ರೂಪವೆನಿಸಿಕೊಂಡಿರುವ ಕುಂದಾಪ್ರ ಕನ್ನಡ ಸರಿಸುಮಾರು ಬ್ರಹ್ಮಾವರದಿಂದ ಶಿರೂರಿನ ತನಕ ಮೂರು ತಾಲೂಕುಗಳಲ್ಲಿ ವ್ಯಾಪಿಸಿಕೊಂಡಿದೆ. ಕುಂದಾಪ್ರ ಕನ್ನಡ ಭಾಷಿಕರು ರಾಜ್ಯ ರಾಜಧಾನಿ ಸೇರಿದಂತೆ ಪ್ರಪಂಚದ ವಿವಿಧ ದೇಶಗಳಲ್ಲಿ ನೆಲೆನಿಂತಿದ್ದಾರೆ. ಇಷ್ಟ ಮಧ್ಯೆಯೂ ಭಾಷೆಗೊಂದು ತನ್ನದೇ ಆದ ಅಸ್ತಿತ್ವ ಬೇಕು. ಹಾಸ್ಯದ ಕಾರಣಕ್ಕಾಗಿ ಮಾತ್ರ ಬಳಸುವ ಭಾಷೆ, ಕುಂದಾಪುರಿಗರ ಬದುಕಿನ ಭಾಷೆಯೂ ಹೌದು ಎಂಬುದನ್ನು ವಿಶ್ವಕ್ಕೆ ಸಾರಬೇಕು ಎಂಬ ಸದುದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಮುನ್ನುಡಿ ಬರೆಯಲಾಗಿದೆ.

ಆಷಾಡ ಅಮವಾಸ್ಯೆ ದಿನ ಆಚರಣೆ :
ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಪ್ರತಿವರ್ಷ ಆಷಾಡ ಅಮಾವಾಸ್ಯೆ (ಕರ್ಕಾಟಕ ಅಮವಾಸ್ಯೆ) ದಿನ ಆಚರಿಸಲಾಗುತ್ತಿದೆ. ಪ್ರಾದೇಶಿಕ ಹಬ್ಬಗಳೊಂದಿಗಿನ ಭಾಷೆಯ ನಂಟು ಹೆಚ್ಚಿರುವ ಕಾರಣಕ್ಕೆ, ನಮ್ಮ ಮೊದಲ ಹಬ್ಬವೂ ಆಗಿರುವುದರಿಂದ ಪ್ರತಿವರ್ಷ ಹಬ್ಬದ ದಿನವೇ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಅಧ್ಯಯನ ಪೀಠ ಸ್ಥಾಪನೆಗೆ ಅನುದಾನ ಮಂಜೂರು:
ಕುಂದಾಪ್ರ ಕನ್ನಡ ಭಾಷೆಗೆ ನಮ್ಮ ಹಿರಿಕರ ಕೊಡುಗೆ ದೊಡ್ಡದಿದೆ. ಅದು ಅಷ್ಟಾಗಿ ಗ್ರಾಂಥಿಕ ರೂಪ ಪಡೆದುಕೊಳ್ಳದೇ ಇದ್ದರೂ, ಆಡುಭಾಷೆಯಾಗಿ ಉಳಿದಿದೆ. ಆದರೆ ಕೆಲವೊಂದಿಷ್ಟು ವರ್ಷಗಳ ಈಚೆಗೆ ಕುಂದಾಪ್ರ ಕನ್ನಡ ದಾಖಲೀಕರಣ ಪ್ರಕ್ರಿಯೆಗಳು ನಡೆದಿವೆ. ನಿಘಂಟು, ಜಾನಪದ ಕೋಶಗಳಲ್ಲಿ ಕುಂದಾಪ್ರ ಕನ್ನಡವನ್ನು ದಾಖಲಿಸುವ ಕಾರ್ಯ ನಡೆದಿದೆ. ಕುಂದಾಪ್ರ ಕನ್ನಡದ ಸಾಹಿತ್ಯ, ಹಾಡು, ಸಿನೆಮಾ ಭಾಷೆಯ ಸೊಬಗನ್ನು ಹೆಚ್ಚಿಸುತ್ತಲೇ ಯುವಜನರಿಗೆ ಆಪ್ತವಾಗುವಂತೆ ಮಾಡಿದೆ. ಆದರೆ ಅಷ್ಟಕ್ಕೇ ನಿಂತರೆ ಸಾಲದು. ಭಾಷಾ ಸಂಪತ್ತು ಸಂಪನ್ನಗೊಳಿಸುವ ಹಾಗೂ ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆಗಳು ಹೆಚ್ಚೆಚ್ಚು ನಡೆಯಬೇಕಿದೆ. ಮಂಗಳೂರು ವಿವಿ ಈಗಾಗಲೇ ಕೈಗೊಂಡಿರುವ ಅಧ್ಯಯನ ಪೀಠ ಪ್ರಕ್ರಿಯೆಗೆ ಸರಕಾರ ಸ್ಪಂದಿಸಿದ್ದು ಮೊದಲ ಹಂತದ ಹಣ ಬಿಡುಗಡೆಗೊಂಡಿದೆ. ಪ್ರತ್ಯೇಕ ಅಕಾಡೆಮಿ ಬೇಡಿಕೆಯೂ ಇದ್ದು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.

Exit mobile version