Kundapra.com ಕುಂದಾಪ್ರ ಡಾಟ್ ಕಾಂ

ಟೀಮ್ ಕುಂದಾಪುರಿಯನ್ಸ್ ತಂಡದಿಂದ ಬೆಂಗಳೂರಿನಲ್ಲಿ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ಕುಂದಾಪುರ ಕನ್ನಡ ಹಬ್ಬದ ಸಂಭ್ರಮ ಮನೆಮಾಡಿತ್ತು. ಟೀಮ್ ಕುಂದಾಪುರಿಯನ್ಸ್ ವತಿಯಿಂದ ಬಸವೇಶ್ವರ ನಗರದಲ್ಲಿ ಮಾತಿನ್ ಹಬ್ಬ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಇಲ್ಲಿ ಕುಂದಾಪುರಿಗರು ಎದುರಿಸುತ್ತಿರೋ ಸಮಸ್ಯೆ ಹಾಗೂ ಕನಸಿನ ಕುಂದಾಪುರದ ಬಗ್ಗೆ ಹಲವು ನಿರ್ಣಯ ಕೈಗೊಳ್ಳಲಾಯ್ತು.

ಬದುಕು ಕಟ್ಟಕೊಳ್ಳುವ ಸಲುವಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಯಾದ ಕುಂದಾಪುರ ಭಾಗದವರೇ ಸೇರಿ ಕಟ್ಟಿದ ತಂಡವೇ ಟೀಂ ಕುಂದಾಪುರಿಯನ್ಸ್. ಈಗಾಗಲೇ ಹತ್ತು-ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಹಾನಗರಿಯಲ್ಲಿ ಮನೆಮಾತಾದ ತಂಡ, ಇಂದು ಕುಂದಾಪುರದ ಹಬ್ಬದ ಮೂಲಕ ತಮ್ಮ ಭಾಷಾ ಪ್ರೇಮ ಮತ್ತು ಬದ್ದತೆಯನ್ನ ಮೆರೆದಿದೆ.

ಕುಂದಾಪುರದ ಗ್ರಾಮೀಣ ಸೊಗಡಿನ ಅಟ:
ಮಾತಿನ ಹಬ್ಬ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಕನ್ನಡ ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ದೀಪಕ್ ಶೆಟ್ಟಿ ಬಾರ್ಕೂರು, ನಟ ಕವೀಶ್ ಶೆಟ್ಟಿ, ಸಮಾಜಸೇವಕ ಗೋವಿಂದ್ ಪೂಜಾರಿ, ಅಜಿತ್ ಶೆಟ್ಟಿ ಉಳ್ತೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಕುಂದಾಪುರಿಗರಿಗೆ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಾಯ್ತು. ಕಾರ್ಯಕ್ರಮದಲ್ಲಿ ಕುಂದಾಪುರ ಕ್ವಿಜ್, ಕಠಿಣ ಪದಗಳ ಅರ್ಥ ಹೇಳುವ ಸ್ಪರ್ಧೆ ನಡೆಯಿತು. ಹಾಗೇ ಕಾರ್ಯಕ್ರಮದಲ್ಲಿ ಕುಂದಾಪುರದ ಗ್ರಾಮೀಣ ಆಟಗಳನ್ನ ಆಡಿಸಿ ಬಾಲ್ಯವನ್ನು ಮೆಲಕು ಹಾಕಲಾಯ್ತು. ಈ ಸಂದರ್ಭದಲ್ಲಿ ಕುಂದಾಪುರ ಗ್ರಾಮೀಣ ಭಾಗದ ಲಗೋರಿ ಆಟವನ್ನು ಆಡಿಸಿದ್ದು ನೆರೆದಿದ್ದ ಕುಂದಾಪುರಿಗರಿಗೆ ತಮ್ಮ ಹುಟ್ಟೂರನ್ನ ನೆನಪಿಸಿತು. ಹಾಗೆ ಇನ್ನು ಹಲವು ಆಟೋಟ ಸ್ಪರ್ಧೆಗಳು ಬಂದವರ ಗಮನ ಸೆಳೆಯಿತು. ಕುಂದಾಪುರ ಶೈಲಿಯ ಗಂಜಿ-ಉಪ್ಪಿನೋಡಿ ಬಂದರನ್ನ ಆಕರ್ಷಿಸಿತು.

ಟೀಮ್ ಕುಂದಾಪುರಿಯನ್ಸ್ ಕೆಲಸಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ:
ಕುಂದಾಪುರವು ಒಂದು ಕಡೆ ಸಮುದ್ರ, ಪಶ್ಚಿಮ ಘಟ್ಟ ಸಮೃದ್ದ ಸಂಸ್ಕ್ರತಿ ಹೊಂದಿದ ವೈಶಿಷ್ಟ್ಯ ಪ್ರದೇಶ. ದೇಶದ ನಾನಾ ಭಾಗಗಳಲ್ಲಿ ಬದುಕು ಕಟ್ಟಿಕೊಂಡರೂ ನಮ್ಮವರು ಭಾಷೆಯನ್ನ ಪ್ರೀತಿಸೋದನ್ನ ನೋಡೋದೇ ಚೆಂದ. ಹೀಗೆ ಬೆಂಗಳೂರಿನಲ್ಲಿ ನಮ್ಮ ಟೀಮ್ ಕುಂದಾಪುರಿಯನ್ಸ್ ಮಾತಿನ ಹಬ್ಬ ಕಾರ್ಯಕ್ರಮದ ಮೂಲಕ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಚರಣೆ ಮಾಡುತ್ತಿರೋದು ಶ್ಲಾಘನೀಯ” ಅಂತ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ

ಜುಲೈ 23 ಕ್ಕೆ ಅದ್ದೂರಿ ಕುಂದಾಪುರ ಹಬ್ಬ ಕಾರ್ಯಕ್ರಮ:
ಹಾಗೇ ತಿಂಗಳ 23ಕ್ಕೆ ಬೆಂಗಳೂರಿನ ಬಂಟರ ಸಂಘದಲ್ಲಿ ಕುಂದಾಪುರ ಕನ್ನಡ ಪ್ರತಿಷ್ಠಾನ ವತಿಯಿಂದ ನಡೆಯಲಿರುವ ಅದ್ಧೂರಿ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಯೋಜಿಸಲಾಗಿದ್ದು ಸರ್ವರನ್ನೂ ಆಮಂತ್ರಿಸಿ, ಕಾರ್ಯಕ್ರಮವನ್ನ ಮುಕ್ತಾಯಗೊಳಿಸಲಾಯ್ತು.

ಇದನ್ನೂ ಓದಿ: ► ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ: ವಿಶ್ವ ಕುಂದಾಪ್ರ ಕನ್ನಡ ದಿನ – https://kundapraa.com/?p=67699 .

Exit mobile version