ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಪ್ರದೇಶಗಳಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯವೂ ಕಡಿಮೆ ಇದೆ. ಈಗಾಗಲೇ ನಿಗದಿತ ಸಮಯಕ್ಕೆ ತೆರಳುತ್ತಿದ್ದ ಬಸ್ ಸಮಯವನ್ನು ಬದಲಿಸಿ ಮತ್ತಷ್ಟು ತೊಂದರೆ ಮಾಡಲಾಗಿದೆ. ಬಸ್ ಸಮಯ ಬದಲಿಸುವಂತೆ ಆಗ್ರಹಿಸಿ ಮುದೂರು, ಕೆರಾಡಿ ಭಾಗದ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶನಿವಾರ ಎದುರು ಪ್ರತಿಭಟನೆ ನಡಸಿದರು.
ವಿದ್ಯಾರ್ಥಿ ಪ್ರತಿನಿಧಿ ಕವಿತಾ ಆಚಾರ್ಯ ಮಾತನಾಡಿ, ಕುಂದಾಪುರದಿಂದ ಮುದೂರು ಮತ್ತು ಕೆರಾಡಿ ಭಾಗಕ್ಕೆ ಸಂಜೆ 4:30ಕ್ಕೆ ಇದ್ದ ಸರಕಾರಿ ಬಸ್ ಸಮಯ ಬದಲಿಸಿ ಸಂಜೆ 5 15ಕ್ಕೆ ಮಾಡಿರುವುದು ಸಮಸ್ಯೆ ಉಂಟುಮಾಡಿದೆ. ಬಸ್ ಇಳಿದು ಕಾಡು ಪ್ರದೇಶದಲ್ಲಿ 2 ರಿಂದ 3ಕಿ.ಮೀ ನೆಡೆದುಕೊಂಡು ಹೊಳೆ, ಕಾಲುಸಂಕ ದಾಟಿ ಹೋಗುವಷ್ಟರಲ್ಲಿ ರಾತ್ರಿಯಾಗುತ್ತದೆ. ವಿದ್ಯಾರ್ಥಿನಿಯರಿಗೆ ಏನಾದರೂ ಸಮಸ್ಯೆಗಳಾದಲ್ಲಿ ಹೊಣೆ ಯಾರು ಎಂದವರು ಪ್ರಶ್ನಿಸಿದರು.
ಮೊದಲಿನ ಸಮಯಕ್ಕೆ ಕುಂದಾಪುರದಿಂದ ಸರಕಾರಿ ಬಸ್ಸುಗಳು ಹೊರಡುವಂತೆ ಮಾಡಬೇಕು, ಅವ್ಯವಸ್ಥೆ ಹೀಗೆಯೇ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ಕುಂದಾಪುರ ವಿಭಾಗ ವ್ಯವಸ್ಥಾಪಕ, ವಿದ್ಯಾರ್ಥಿಗಳು ಕೇಳಿರುವ ಭಾಗಕ್ಕೆ ಮುಂಚಿತವಾಗಿ ಕೆಎಸ್ಆರ್ಟಿಸಿ ಬಸ್ ಓಡಿಸಲು ಆರ್ಟಿಓ ಅವರಿಂದ ಅನುಮತಿ ಇಲ್ಲ. ಕೆಲವು ದಿನಗಳ ಕಾಲ 4:15ಕ್ಕೆ ಓಡಿಸಲಾಗಿತ್ತು. ಆದೇ ಕಾರಣಕ್ಕೆ ಖಾಸಗಿ ಬಸ್ ಮಾಲಿಕರು ಕೋರ್ಟಿಗೆ ಹೋಗಿದ್ದಾರೆ. ಮತ್ತೆ ಅದೇ ಸಮಯಕ್ಕೆ ಬಸ್ ಓಡಿಸಿದರೆ ಸೀಜ್ ಆಗಲಿದೆ. ಹಾಗಾಗಿ ಆರ್ಟಿಓ ಅವರಿಂದ ಅನುಮತಿ ದೊರೆಯಬೇಕಿದೆ. ತಾತ್ಕಾಲಿಕ ಪರ್ಮಿಟ್ ಕೊಟ್ಟರೂ ಸರಿಯಾದ ಸಮಯಕ್ಕೆ ಬಸ್ ಓಡಿಸಲು ಸಾಧ್ಯ ಎಂದರು.