Kundapra.com ಕುಂದಾಪ್ರ ಡಾಟ್ ಕಾಂ

ಹಡಾಳಿಯಲ್ಲಿ ಹಡಿಲು ಭೂಮಿ ನಾಟಿ ಕಾರ್ಯಕ್ಕೆ ಜಿ.ಪಂ. ಸಿಇಒ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.25:
ಕುಂದನಾಡು ರೈತ ಉತ್ಪಾದಕರ ಕಂಪೆನಿ ನೇತೃತ್ವದಲ್ಲಿ ಉಡುಪಿ ಜಿ.ಪಂ., ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ಇಲಾಖೆ ಉಡುಪಿ, ಕುಂದಾಪುರ ತಾ.ಪಂ., ಅಂಪಾರು ಗ್ರಾ.ಪಂ., ರೋಟರಿ ಕ್ಲಬ್ ಅಂಪಾರು ಹಾಗೂ ವನಶ್ರೀ ಸಂಜೀವಿನಿ ಒಕ್ಕೂಟ ಅಂಪಾರಿನ ಸಂಯುಕ್ತ ಆಶ್ರಯದಲ್ಲಿ ಅಂಪಾರು ಗ್ರಾಮದ ಹಡಾಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಹಡಿಲು ಭೂಮಿ ನಾಟಿ ಕಾರ್ಯಕ್ಕೆ ಜಿ.ಪಂ. ಸಿಇಒ ಪ್ರಸನ್ನ ಎಚ್. ಚಾಲನೆ ನೀಡಿದರು.

ಈ ವೇಳೆ ಸಿಇಒ ಪ್ರಸನ್ನ ಅವರು ಕೋಣಗಳನ್ನು ಕಟ್ಟಿ ಗದ್ದೆಯನ್ನು ಉಳುಮೆ ಮಾಡಿದ್ದಲ್ಲದೆ, ನೇಜಿ ನೆಟ್ಟು ಖುಷಿಪಟ್ಟರು. ಬಳಿಕ ಅವರು ಮಾತನಾಡಿ, ಜಿಲ್ಲೆಯ 155ಗ್ರಾ.ಪಂ.ಗಳಲ್ಲಿ ಪ್ರತೀ ಗ್ರಾ.ಪಂ.ಗೆ ತಲಾ 10 ಎಕರೆ ಹಡಿಲು ಭೂಮಿ ನಾಟಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಇದರ ಪ್ರಕಾರ ಕನಿಷ್ಠ 1,550 ಎಕರೆ ಹಡಿಲು ಭೂಮಿ ಹಸನಾಗಲಿದೆ. ಈವರೆಗೆ 1.130 ಎಕರೆ ಭೂಮಿಯನ್ನು ಗುರುತಿಸಿ, ನಾಟಿ ಮಾಡುವ ಕಾರ್ಯವಾಗುತ್ತಿದೆ ಎಂದರು.

ಜಿ.ಪಂ. ಸಿಇಒ ಅವರೊಂದಿಗೆ ತಾ.ಪಂ. ಇಒ ಭಾರತಿ, ಸಂಜೀವಿನಿ ಒಕ್ಕೂಟದ ಮಹಿಳೆಯರು, ಕುಂದನಾಡು ಒಕ್ಕೂಟದ ಸದಸ್ಯರು, ಗ್ರಾ.ಪಂ. ಸದಸ್ಯರು, ಊರವರು ಸಹ ನಾಟಿ ಕಾರ್ಯದಲ್ಲಿ ಭಾಗಿಯಾದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದನಾಡು ರೈತ ಉತ್ಪಾದಕರ ಕಂಪೆನಿಯ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲಾ ಪಂಚಾಯತ್ ಆಶಯದಂತೆ ನಮ್ಮ ಸಂಸ್ಥೆಯಿಂದಲೂ ಹಡಿಲು ಭೂಮಿ ನಾಟಿ, ನೈಸರ್ಗಿಕ ಆಹಾರವನ್ನು ಹೆಚ್ಚೆಚ್ಚು ಉತ್ಪಾದಿಸುವ ಗುರಿ ಹಾಕಿಕೊಂಡಿದ್ದೇವೆ. ಅದರ ಭಾಗವಾಗಿ ಇಲ್ಲಿ ಕಳೆದ 3-4 ವರ್ಷಗಳಿಂದ ಹಡಿಲು ಬಿಟ್ಟಿರುವ ಗದ್ದೆಗಳಲ್ಲಿ ನಾಟಿ ಮಾಡಲಾಗುತ್ತಿದೆ. ಈ ವರ್ಷ 3 ಹಂಗಾಮಿನಲ್ಲೂ ಬೆಳೆಯುವ ಗುರಿಯಿದ್ದು, ತರಕಾರಿಯನ್ನು ಬೆಳೆಯುತ್ತೇವೆ ಎಂದರು.

ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಖಾರಿ ಭಾರತಿ, ಕುಂದಾಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ ಮಾಡ, ಅಂಪಾರು ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಕುಮಾರ್ ಶೆಟ್ಟಿ ಮಾತನಾಡಿದರು.

ಹಿರಿಯ ಕೃಷಿಕರಾದ ರಘುರಾಮ ಶೆಟ್ಟಿ, ಮಂಜಯ್ಯ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಅಂಪಾರು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ, ಸದಸ್ಯರು, ವನಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೋಶನಿ ಶೆಟ್ಟಿ, ಪದಾಧಿಕಾರಿಗಳು, ಸದಸ್ಯರು, ರೋಟರಿ ಕ್ಲಬ್ ಪದಾಧಿಕಾರಿಗಳು, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷೆ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ತಾ.ಪಂ. ಮ್ಯಾನೇಜರ್ ರಾಮಚಂದ್ರ ಮಯ್ಯ, ಮತ್ತಿತರ ಅಧಿಕಾರಿಗಳು, ಉಪಸ್ಥಿತರಿದ್ದರು.

ವಕೀಲರಾದ ಶಾನ್ಕಟ್ಟು ಉಮೇಶ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಗ್ರಾ.ಪಂ. ಸದಸ್ಯ ಗಣೇಶ್ ಅಡಿಗ ವಂದಿಸಿದರು.

Exit mobile version