Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕಿನಲ್ಲಿ ಮುಂದುವರಿದ ಮಳೆಯ ತೀವ್ರತೆ. ಮನೆ, ರಸ್ತೆ, ತೋಟಗಳಿಗೆ ಹಾನಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.25:
ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ತೀವ್ರತೆ ಮುಂದುವರಿದ ಪರಿಣಾಮ ನದಿಗಳು ತಂಬಿ ಹರಿಯುತ್ತಿದೆ, ಸಮುದ್ರ ಪ್ರಕ್ಷುಬ್ದಗೊಂಡು ಅಬ್ಬರಿಸುತ್ತಿದೆ. ಅಲ್ಲಲ್ಲಿ ತಗ್ಗು ಪ್ರದೇಶ ಜಲಾವೃತ, ಪ್ರವಾಹ ಪರಿಸ್ಥಿತಿ ಸೇರಿದಂತೆ ಸಾಕಷ್ಟು ಮಳೆಹಾನಿಯೂ ಸಂಭವಿಸುತ್ತಿದೆ.

ಕರಾವಳಿಯಲ್ಲಿ ಜೂ.24ರಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನಿರಂತರ ಮಳೆ ಸುರಿಯುತ್ತಲೇ ಇದೆ. ಕುಂದಾಪುರದ ಪಂಚ ನದಿಗಳಾದ ಸೌರ್ಪಣಿಕ, ಖೇಟ, ಚಕ್ರ, ಕುಬ್ಜ, ವಾರಾಹಿ ನದಿಗಳು ತುಂಬಿ ಹರಿಯುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ಶಿರೂರು ಕರಾವಳಿಯ ಕೆಲ ಭಾಗಗಳಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಬೈಂದೂರು ಕುಂದಾಪುರ ಬ್ರಹ್ಮಾವರ ಹೆಬ್ರಿ ತಾಲೂಕುಗಳಲ್ಲಿ ಗಾಳಿ ಮಳೆ ಹಾಗೂ ಮರ ಬಿದ್ದು ಮನೆ, ಕೊಟ್ಟಿಗೆ ಹಾಗೂ ತೋಟಗಳಿಗೆ ಹಾನಿಯಾಗಿದೆ. ವಿದ್ಯುತ್ಕಂಬಗಳ ಮೇಲೆ ಮರ ಬಿದ್ದ ಪರಿಣಾಮ ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಕರಾವಳಿಯಿಂದ ಮಲೆನಾಡಿಗೆ ಸಂಪರ್ಕಿಸುವ ರಸ್ತೆಯಲ್ಲಿ ಅಲ್ಲಲ್ಲಿ ಮರಗಳು, ಕೆಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ.

ನೆರೆ ನೆರೆ ನೆರೆ:
ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದರಿಂದ ನಾಡ ಗ್ರಾಮದ ಚಿಕ್ಕಳಿ ಪರಿಸರ, ಸಾಲ್ಬುಡ, ಹೊಸಾಡು ಭಾಗಗಳಲ್ಲಿ ಬ್ರಹ್ಮಕುಂಡ ನದಿ ತುಂಬಿರುತ್ತಿರುವುದರಿಂದ ಮಾರಣಕಟ್ಟೆ ದೇಗುಲದ ಪರಿಸರ, ಕುಬ್ಜಾ ನದಿ ತುಂಬಿ ಹರಿಯುತ್ತಿರುವುದರಿಂದ ಕಾವ್ರಾಡಿಮ, ಮುಂಭಾರಿ, ಕೌಜೂರು, ಮಾವಿನಗುಳಿ, ಬಿಜ್ರಿ ಭಾಗಗಳಲ್ಲಿ, ವಾರಾಹಿ ನದಿಯಿಂದಾಗಿ ಹಾಲಾಡಿ ಆಸುಪಾಸುವಿನಲ್ಲಿ ನದಿನೀರು ಕೃಷಿಭೂಮಿ, ಮನೆ, ದೇಗುಲಗಳ ಪರಿಸರಕ್ಕೆ ನದಿ ನೀರು ನುಗ್ಗಿದೆ.

ಸೇನಾಪುರ ಗ್ರಾಮದಲ್ಲಿ ಮನೆಯೊಂದು ಗಾಳಿ ಮಳೆಗೆ ನೆಲಸಮವಾಗಿದೆ. ಬೈಂದೂರು ಗಂಗಾನಾಡು ನೀರೋಡಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಕಿರುಸೇತುವೆ ಕೊಚ್ಚಿಹೋಗಿದೆ. ಒತ್ತಿನಣೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತನ ಭೀತಿ ಮುಂದುವರಿದಿದೆ.

ಹವಮಾನ ಇಲಾಖೆಯ ವರದಿಯಂತೆ ಕುಂದಾಪುರ ತಾಲೂಕಿನಲ್ಲಿ 107.3ಮಿ.ಮೀ, ಬೈಂದೂರು ತಾಲೂಕಿನಲ್ಲಿ 139.9 ಮಿ.ಮೀ, ಬ್ರಹ್ಮಾವರದಲ್ಲಿ 72.5, ಹೆಬ್ರಿ ತಾಲೂಕಿನಲ್ಲಿ 118.8 ಮಿ.ಮೀ ಮಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ ಜು.25ರಂದು ಅಂದಾಜಿಸಿದಂತೆ 2.30ಲಕ್ಷ ಹಾನಿಯಾಗಿದ್ದರೆ, ಕುಂದಾಪುರ ತಾಲೂಕಿನಲ್ಲಿ 3.90 ಲಕ್ಷದಷ್ಟು ಹಾನಿಯನ್ನು ಅಂದಾಜಿಸಲಾಗಿದೆ.

ಅಧಿಕ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜು.24 ಹಾಗೂ 25ರಂದು ರಜೆ ಘೋಷಿಸಲಾಗಿತ್ತು.

Exit mobile version