Site icon Kundapra.com ಕುಂದಾಪ್ರ ಡಾಟ್ ಕಾಂ

ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು,ಜು.30:
ಸ್ನೇಹಿತರೊಂದಿಗೆ ಕಳೆದ ಭಾನುವಾರ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದ ಸಂದರ್ಭ ಕಾಲುಜಾರಿ ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ ಭದ್ರಾವತಿಯ ಯುವಕ ಶರತ್ ಕುಮಾರನ [23] ಮೃತದೇಹ ಜಲಪಾತದ ಸುಮಾರು 100 ರಿಂದ 70ಮೀ ದೂರದಲ್ಲಿ ಪತ್ತೆಯಾಗಿದೆ.

ವೀಡಿಯೋ

ಶರತ್ ಹಾಗೂ ಸ್ನೇಹಿತ ಗುರುರಾಜ ಜೊತೆಗೂಡಿ ಜು.23ರ ಭಾನುವಾರದಂದು ಭದ್ರಾವತಿಯಿಂದ ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತ ನೋಡಲು ತೆರಳಿದ್ದರು. ಮಧ್ಯಾಹ್ನ 3-30ರ ಹೊತ್ತಿಗೆ ಜಲಪಾತ ಬಳಿ ವೀಡೀಯೋ ಮಾಡಲು ಹೇಳಿ ಬಂಡೆಯ ಮೇಲೆ ನಿಂತಿದ್ದ ಶರತ್, ಕಾಲು ಜಾರಿ ಸೌಪರ್ಣಿಕ ನದಿಗೆ ಬಿದ್ದಿದ್ದು ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಈ ಘಟನೆ ಸ್ನೇಹಿತನ ಮೊಬೈಲಿನಲ್ಲಿಯೂ ಸೆರೆಯಾಗಿತ್ತು.

ಘಟನೆಯ ಮಾಹಿತಿ ದೊರೆತ ಬಳಿಕ, ಪ್ರಕರಣ ದಾಖಲಿಸಿಕೊಂಡು ಕಳೆದೊಂದು ವಾರದಿಂದ ಕೊಲ್ಲೂರು ಠಾಣೆಯ ಪೊಲೀಸ್ ತಂಡ, ಅರಣ್ಯ ಇಲಾಖೆ ಸಿಬ್ಬಂದಿಗಳು, ಉಡುಪಿಯ ಎಸ್‌ಡಿಆರ್‌ಎಫ್‌ ತಂಡ, ಕುಂದಾಪುರ ಹಾಗೂ ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ಇವರಿಗೆ ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಸದಸ್ಯರು, ಸ್ಥಳೀಯರು, ಮೃತ ಶರತ್‌ನ ಸಂಬಂಧಿ ಹಾಗೂ ಸ್ನೇಹಿತರ ಜೊತೆಗೂಡಿ ಹುಡುಕಾಟ ನಡೆಸಿದ್ದರು.

► ಜಡ್ಕಲ್: ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನದಿಯಲ್ಲಿ ಪತ್ತೆ – https://kundapraa.com/?p=68092 .

ಈ ನಡುವೆ ಸಾಹಸಿ ಚಿತ್ರದುರ್ಗದ ಜ್ಯೋತಿರಾಜ್ ತಂಡ, ಈಶ್ವರ್ ಮಲ್ಪೆ ತಂಡವೂ ನೀರಿನ ರಭಸದ ಒತ್ತಡದ ನಡುವೆಯೂ ಹುಡುಕಾಟ ನಡೆಸಿ ಹಿಂದಿರುಗಿದ್ದರು. ಡ್ರೋನ್ ಮೂಲಕವೂ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಕೊಲ್ಲೂರು ಠಾಣೆಯ ಪಿಎಸ್‌ಐಗಳಾದ ಜಯಶ್ರೀ ಹಾಗೂ ಸುಧಾರಾಣಿ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕವೂ ಹುಡುಕಾಟ ನಡೆಸಲಾಗಿತ್ತು.

ಶರತ್‌ನ ತಂದೆ ತಾಯಿ ಹೇಗಾದರೂ ತಮ್ಮ ಮಗನನ್ನು ಹುಡುಕಿಕೊಡಿ ಎಂದು ಸರಕಾರಕ್ಕೆ ಬೇಡಿಕೆ ಇರಿಸಿದ್ದರು. ನಿನ್ನೆಯಿಂದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಹುಡುಕಾಟ ಚುರುಕುಗೊಳಿಸಿದ್ದು, ಶರತ್ ಮೃತದೇಹ ಅಲ್ಲಿಯೇ ಸಮೀಪದ ಕಲ್ಲುವ ಹಾಗೂ ಮರದ ಪೊಟರೆಯಲ್ಲಿ ಸಿಲುಕಿಕೊಂಡ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

► ಕೊಲ್ಲೂರು: ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರುಪಾಲು – https://kundapraa.com/?p=67923 .

Exit mobile version