Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿ: 9 ಮೀನುಗಾರರ ರಕ್ಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೀನುಗಾರಿಕೆಗಾಗಿ ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯೊಂದು ಪಲ್ಟಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.

ಉಪ್ಪುಂದ ತಾರಾಪತಿಯಿಂದ ಬೆಳಿಗ್ಗೆ 7:30ರ ಸುಮಾರಿಗೆ ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅಂದಾಜು 5 ನಾಟಿಕಲ್ ಮೈಲುಗಳ ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಬಲೆಗಳ ನಡುವೆ ಸಿಲುಕಿದ್ದ ಓರ್ವ ಮೀನುಗಾನನ್ನು ಸಹಮೀನುಗಾರ ಚಂದ್ರ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಬಳಿಕ ಸಮೀಪದ ದೋಣಿಗಳಿಗೆ ಮಾಹಿತಿ ತಲುಪಿಸಿದ್ದು, ಮೀನುಗಾರರು ನೆರವಿಗೆ ಬಂದಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಮೀನುಗಾರರು ಹಾಗೂ ದೋಣಿಯನ್ನು ಮರವಂತೆ ಬಂದರಿಗೆ ಕೊಂಡೊಯ್ಯಲಾಯಿತು. ಅಪಘಾತದಲ್ಲಿ ದೋಣಿಯಲ್ಲಿ ಬಲೆ, ಇಂಜಿನ್‌ಗೆ ಹಾನಿಯಾಗಿದ್ದು 2 ಲಕ್ಷಕ್ಕೂ ಅಧಿಕ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.

ಸೋಮವಾರವಷ್ಟೇ ಕರ್ಕಿಕಳಿ ಬಳಿ ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ಪಟ್ಟೆಬಲೆ ದೋಣಿಯೊಂದು ಮಗುಚಿಬಿದ್ದು ಇಬ್ಬರು ಮೀನುಗಾರರು ಮೃತಪಟ್ಟಿದ್ದರು. ಒಟ್ಟು ಎಂಟು ಮಂದಿ ಮೀನುಗಾರರ ಈ ಪೈಕಿ ಆರು ಮಂದಿ ಈಜಿ ದಡ ಸೇರಿದ್ದರು. ಈ ಘಟನೆ ಮಾಸುವ ಮುನ್ನವೇ ಇನ್ನೋಂದು ದೋಣಿ ಮಗುಚಿಬಿದ್ದಿರುವುದು ಮೀನುಗಾರರಲ್ಲಿ ಆಘಾತವನ್ನುಂಟುಮಾಡಿದೆ.

ಲೈಫ್ ಜಾಕೆಟ್ ಕಡ್ಡಾಯವಾಗಿ ಬಳಸುವಂತಾಗಲಿ:
ಮೀನುಗಾರಿಕೆಗೆ ತೆರಳುವ ಸಂದರ್ಭ ಲೈಫ್ ಜಾಕೆಟ್ ಬಳಸುವುದು ಕಡ್ಡಾಯವಾದರೂ, ಮೀನುಗಾರರೇ ನಿರ್ಲಕ್ಷ್ಯ ತೋರುವುದು ಕಂಡುಬರುತ್ತಿದೆ. ಸರಕಾರ ನಿಯಮಿತ ಲೈಫ್ ಜಾಕೆಟ್ಗಳನ್ನು ವಿತರಿಸುತ್ತಿದ್ದು, ಎಲ್ಲಾ ಮೀನುಗಾರರಿಗೂ ವಿತರಿಸುವುದು ಮತ್ತು ಅದರ ಕಡ್ಡಾಯ ಬಳಕೆ ಮಾಡುವುದರ ಬಗ್ಗೆ ಇಲಾಖೆ ಗಮನಹರಿಸಬೇಕಿದೆ.

Exit mobile version