Kundapra.com ಕುಂದಾಪ್ರ ಡಾಟ್ ಕಾಂ

ಶ್ರೀರಾಜ್‌ ವಕ್ವಾಡಿ ಅವರ ಕಿರು ಕಾದಂಬರಿ – ‘ಅತ್ತ ನಕ್ಷತ್ರ’ ಬಿಡುಗಡೆ

ಸಮಕಾಲೀನ ಜಗತ್ತನ್ನು ದರ್ಶಿಸುವುದು ಸಾಹಿತ್ಯದ ತುರ್ತು – ರಾಜ್‌ ಆಚಾರ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಾತಿ, ವರ್ಣ, ವರ್ಗಗಳ ಮೇಲಿನ ಸಂಘರ್ಷಕ್ಕೆ ಶತಮಾನಗಳ ಇತಿಹಾಸವಿದೆ. ಈ ಸಂಘರ್ಷದಲ್ಲಿ ನಮ್ಮೊಳಗಿನ ಜೀವದ್ರವ್ಯ ಆಕುಂಚನವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಎಂದಿಗಿಂತಲೂ ಇಂದು ತುಸು ಹೆಚ್ಚೇ ಇದೆ ಎಂದು ಕವಿ, ಸಾಹಿತಿ ರಾಜ್‌ ಆಚಾರ್ಯ ಪುಣೆ ಹೇಳಿದರು.

ಅವರು ರವಿವಾರ ಜನಪ್ರತಿನಿಧಿ ಕುಂದಾಪುರದಲ್ಲಿ ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿದ ಕವಿ, ಲೇಖಕ ಶ್ರೀರಾಜ್‌ ವಕ್ವಾಡಿಯವರ ಕಿರು ಕಾದಂಬರಿ ಅತ್ತ ನಕ್ಷತ್ರ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಸ್ತು, ವಿಷಯ, ವ್ಯಕ್ತಿ ಈ ಮೂರರ ನೆಲೆಯಲ್ಲಿ ತಾರ್ಕಿಕ ಅಂಶಗಳನ್ನು, ಸಾಂಕೇತಿಕವಾಗಿ ಭಾಷೆ ಸಂಜ್ಞೆಗಳನ್ನು ಪರಿಣಾಮಕಾರಿಯಾಗಿ ಸಾಹಿತ್ಯದಲ್ಲಿ ಬಳಸಿಕೊಳ್ಳುವುದು ಅಗತ್ಯ. ಸಾಹಿತ್ಯಮುಖಿಯ ವೈಯಕ್ತಿಕ ನೆಲೆಗಟ್ಟಿನಲ್ಲಿ ವ್ಯಕ್ತವಾಗುವ ನೀತಿಸತ್ಯಗಳು ಸಾಮಾಜಿಕ ನೆಲೆಯಲ್ಲಿ ಪರಿಗಣನೆಗೆ ಬಂದರೆ ಅದು ಸಾಹಿತಿಯೊಬ್ಬನ ಗೆಲುವು. ಸಮಕಾಲೀನ ಜಗತ್ತನ್ನು ತೆರೆದಿಡುವ ತುರ್ತು ಅಗತ್ಯ ಸಾಹಿತ್ಯಕ್ಕಿದೆ. ವ್ಯಕ್ತಿಕೇಂದ್ರೀಕೃತ ನೆಲೆಯಿಂದಲೇ ಸಮಕಾಲೀನ ಜಗತ್ತಿನ ದರ್ಶನ ಹೊರಗೆಡಹಲು ಸಾಧ್ಯ ಎನ್ನುವುದಕ್ಕೆ ʼಅತ್ತ ನಕ್ಷತ್ರʼ ಉತ್ತಮ ಕೃತಿ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಒಂದು ಕೃತಿ ಭಾಷೆಯ ಬಳಕೆಯಿಂದ ಮತ್ತು ಕೃತಿಕಾರನ ಸೃಜನಶೀಲತೆಯಿಂದ ಮಾತ್ರ ಓದುಗನನ್ನು ಪರಿಣಾಮಕಾರಿಯಾಗಿ ತಲುಪುವುದಕ್ಕೆ ಸಾಧ್ಯ. ಸೂಕ್ಷ್ಮ ಸಂವೇದನೆ ಮತ್ತು ಕಾಲ್ಪನಿಕ ಸೃಜನಶೀಲತೆ ಇರುವ ಒಬ್ಬ ಲೇಖಕನಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಕಾವ್ಯಾತ್ಮಕ ಭಾವದಿಂದ ಒಂದು ಕಥೆಯನ್ನು ಹೊರತರುವುದು ಸುಲಭವಲ್ಲ. ಈ ಕೃತಿಯಲ್ಲಿ ಅಂತಹ ಗುಣ ಎದ್ದು ತೋರುತ್ತದೆ ಎಂದರು.

ಮೈಸೂರು ವಿದ್ಯಾವರ್ಧಕ ಕಾನೂನು ಕಾಲೇಜಿನ ಉಪನ್ಯಾಸಕಿ ಕೀರ್ತಿ ಭಟ್ ಕೃತಿ ಪರಿಚಯ ಮಾಡಿಕೊಟ್ಟರು, ಕೃತಿಕಾರ ಶ್ರೀರಾಜ್‌ ವಕ್ವಾಡಿ ಪ್ರಸ್ತಾವಿಸಿ ಸ್ವಾಗತಿಸಿದರು, ಪ್ರಕಾಶಕ ಸುಬ್ರಹ್ಮಣ್ಯ ಪಡುಕೋಣೆ ವಂದಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ವಿನಯಾ ಶೆಟ್ಟಿ ಕೌಂಜೂರು ಕಾರ್ಯಕ್ರಮ ನಿರೂಪಿಸಿದರು.

ಬಿಡುಗಡೆ ಕಾರ್ಯಕ್ರಮದ ನಂತರ ಕೃತಿಕಾರರೊಂದಿಗೆ ʼಅತ್ತ ನಕ್ಷತ್ರ : ಮಾತು ಕಥೆʼ ಸಂವಾದದಲ್ಲಿ ಸಾಹಿತಿ ರಾಜ್‌ ಆಚಾರ್ಯ ಪುಣೆ, ಲೇಖಕಿ ಪೂರ್ಣೀಮಾ ಭಟ್‌ ಕಮಲಶಿಲೆ, ಉಪನ್ಯಾಸಕಿಯರಾದ ಅಮೃತಾ ಕುಂದಾಪುರ, ವಿನಯಾ ಶೆಟ್ಟಿ, ಪತ್ರಕತ್ರ ನಿಝಾಮ್‌ ಅನ್ಸಾರಿ ಭಾಗಿಯಾಗಿದ್ದರು.

Exit mobile version