ಕುಂದಾಪುರ: ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಚಂಡಿಕಾಯಾಗ ಹಾಗೂ ನವರಾತ್ರಿ ರಥೋತ್ಸವ ದೇಗುಲದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು.
ದೇಗುಲದ ಸರದಿ ಅರ್ಚಕ ಕೆ. ಮಂಜುನಾಥ ಅಡಿಗ ಅವರ ನೇತೃತ್ವದಲ್ಲಿ ನಿತ್ಯಾನಂದ ಅಡಿಗ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಅರ್ಚಕರಾದ ಡಾ| ಕೆ.ಎನ್. ನರಸಿಂಹ ಅಡಿಗ, ಶ್ರೀಧರ ಅಡಿಗ, ಕೆ.ಎನ್. ಗೋವಿಂದ ಅಡಿಗ ಅವರು ಚಂಡಿಕಾ ಯಾಗದಲ್ಲಿ ಪಾಲ್ಗೊಂಡರು.ಚಿನ್ನದ ರಥದಲ್ಲಿ ಉತ್ಸವ ಮೂರ್ತಿ ಕುಳ್ಳಿರಿಸಿ ದೇಗುಲದ ಒಳಪೌಳಿಯಲ್ಲಿ ರಥ ಒಂದು ಸುತ್ತು ಬರುತ್ತಿರುವಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಭಕ್ತಿ ಪರವಶರಾಗಿ ಮೂಕಾಂಬಿಕೆಯ ದೇವಿ ಸ್ತ್ರೋತ್ರ ಜಪಿಸಿದರು. ಈ ಸಂದರ್ಭ ಅರ್ಚಕರು ಎಸೆಯುವ ನಾಣ್ಯ ಹಿಡಿಯಲು ಭಕ್ತರು ನಡೆಸುತ್ತಿದ್ದ ಪೈಪೋಟಿ ನಡೆಸುತ್ತಿದ್ದರು. ದೇಗುಲದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ವಿ. ಪ್ರಸನ್ನ ಸಂಕಲ್ಪದಲ್ಲಿ ಪಾಲ್ಗೊಂಡರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸವಿತಾ ದೇವಾಡಿಗ, ಕಲ್ಪನಾ ಭಾಸ್ಕರ್, ಶ್ರೀನಿವಾಸ ಕಲ್ಲೂರಾಯ, ರಾಜೇಶ್ ಕೆ.ಎನ್., ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಅಣ್ಣಪ್ಪ ಖಾರ್ವಿ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಅಡಿಗ, ತಾ. ಪಂ. ಸದಸ್ಯ ರಮೇಶ ಗಾಣಿಗ ಕೊಲ್ಲೂರು ಕಂದಾಯ ಹಾಗೂ ಪೊಲೀಸ್ ಇಲಾಖೆ ವರಿಷ್ಠರು ಉಪಸ್ಥಿತರಿದ್ದರು.