Kundapra.com ಕುಂದಾಪ್ರ ಡಾಟ್ ಕಾಂ

ವಾರಾಹಿ ಕಾಮಗಾರಿ ವಿಳಂಬ – ಜಿಲ್ಲಾಧಿಕಾರಿ ಭೇಟಿ. ಕುಡಿಯುವ ನೀರಿಗಾಗಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರು ಒದಗಿಸಲು ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಾರಾಹಿ ಕುಡಿಯುವ ನೀರು ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಅವರು ಈ ಸೂಚನೆ ನೀಡಿದರು.

ವಾರಾಹಿ ಯೋಜನೆಯ ಶಿಂಬ್ರಾ, ಆರೂರು, ಕೊಕ್ಕರ್ಣೆ, ಆವರ್ಸೆ ಹಾಗೂ ಹಾಲಾಡಿ ಗಳಿಗೆ ಭೇಟಿ ನೀಡಿದ ಅವರು ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಈ ವೇಳೆ ಅವರು ಕಾಮಗಾರಿಯ ಮಾಹಿತಿ ನೀಡಿ, ಪೂರ್ವನಿಗದಿಯಂತೆ 2023ರ ಡಿಸೆಂಬರ್ ತಿಂಗಳೊಳಗೆ ವಾರಾಹಿ ಕುಡಿಯುವ ನೀರು ಯೋಜನಾ ಕಾಮಗಾರಿ ಮುಗಿದು ನೀರು ಜನರಿಗೆ ಸಿಗಬೇಕಾಗಿತ್ತು. ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ತೀರಾ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕೇವಲ ಪೈಪ್ಲೈನ್ ಅಳವಡಿಸುವ ಕಾಮಗಾರಿ ಮಾತ್ರ ಶೇ.70ರಷ್ಟು ಪೂರ್ಣಗೊಂಡಿದೆ. ಕೇವಲ ಪೈಪ್ಲೈನ್ ಅಳವಡಿಸುವ ಹಾಗೂ ಉಡುಪಿಯಲ್ಲಿ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸುವ ಕೆಲಸ ಆಗಿದೆ. ಆದರೆ ಸೀತಾ ನದಿ ಹಾಗೂ ಸ್ವರ್ಣ ನದಿಯ ಸೇತುವೆಗಳ ಮೂಲಕ ಪೈಪ್ಲೈನ್ಗಳನ್ನು ಇನ್ನಷ್ಟೇ ಅಳವಡಿಸಬೇಕಾಗಿದೆ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಅಲ್ಲದೇ ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಯ ವಿಷಯವೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದರು.

ಸಿದ್ಧಾಪುರದ ಭರತ್ಕಲ್‌ನಲ್ಲಿ ನೀರು ಶುದ್ದೀಕರಣ ಘಟಕದ ಕಾಮಗಾರಿಯೂ ನಿರೀಕ್ಷಿತ ವೇಗದಲ್ಲಿ ಸಾಗಿಲ್ಲ. ಅಲ್ಲೂ ಪ ಸಾಕಷ್ಟು ಕಾಮಗಾರಿ ನಡೆಯಲು ಬಾಕಿ ಇದೆ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಡಿಯಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ ಎಂದ ಅವರು, ಇನ್ನು ವಾರಾಹಿ ನೀರಾವರಿ ಯೋಜನೆಯೂ ಕುಂಟುತ್ತಾ ಸಾಗುತ್ತಿದೆ. ಕಾಲುವೆಗಳ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಅಡ್ಡಿಯಾಗಿರುವ ಡೀಮ್ಸ್ ಫಾರೆಸ್ಟ್ ಸಮಸ್ಯೆ ಕ್ಲಿಯರೆನ್ಸ್ಗಾಗಿ ಕೇಂದ್ರ ಸರಕಾರಕ್ಕೆ ಬರೆಯಲಾಗಿದ್ದು, ಅಲ್ಲಿಂದ ಬರುವ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು

ಈ ಬಾರಿ ಜುಲೈ ತಿಂಗಳು ಬಿಟ್ಟರೆ ಇನ್ನುಳಿದ ತಿಂಗಳುಗಳಲ್ಲಿ ಮಳೆಯ ಕೊರತೆ ಕರಾವಳಿ ಭಾಗದಲ್ಲಿ ಕಾಣಿಸಿಕೊಂಡಿದೆ. ಮಳೆ ಧಾರಾಳ ಸುರಿಯುವ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಸೂಚನೆ ದೊರಕಿದೆ. ಹೀಗಾಗಿ ಈ ವರ್ಷ ಡಿಸೆಂಬರ್ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಪ್ರಾರಂಭವಾಗುವ ಸಾಧ್ಯತೆ ಕಂಡು ಬರುತ್ತಿದೆ.

ಹೀಗಾಗಿ ಸಾಧ್ಯವಾದಷ್ಟು ಬೇಗ ನಾವು ಕಾಮಗಾರಿಯನ್ನು ಮುಗಿಸಿ ಜನರಿಗೆ ನೀರು ಕೊಡಬೇಕಾಗಿದೆ. ಹೀಗಾಗಿ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯನ್ನು ನಡೆಸುವಂತೆ ಅಧಿಕಾರಿಗಳಿಗೆ ಹಾಗೂ ವಿವಿಧ ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನ ಗಳನ್ನು ನೀಡಿರುವುದಾಗಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version