Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ರಂಗಕಲಾ ಕಮ್ಮಟಕ್ಕೆ ಚಾಲನೆ

ಬೈಂದೂರು: ಇಲ್ಲಿನ ಸುರಭಿ ಕಲಾಶಾಲೆಯ ಆಶ್ರಯದಲ್ಲಿ ಸ್ಥಳೀಯ ಆಶ್ರಮಶಾಲೆಯಲ್ಲಿ ಐದು ದಿನಗಳ ರಂಗಕಲಾ ಕಮ್ಮಟಕ್ಕೆ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸಾಹಿತ್ಯದಲ್ಲಿ ಒಬ್ಬ ವ್ಯಕ್ತಿಯ ಸೃಜನಶೀಲತೆ ಪ್ರಕಟಗೊಳ್ಳುತ್ತದಾದರೆ ರಂಗಕಲೆಯಲ್ಲಿ ಹಲವರ ಸೃಜಶೀಲತೆ ಮೇಳೈಸುತ್ತದೆ. ರಂಗಕಲೆಗೆ ಸಾಹಿತ್ಯದ ಮಿತಿಗಳನ್ನು ದಾಟುವ ಸಾಮರ್ಥ್ಯ ಇದೆ. ಅದು ಹೆಚ್ಚು ಶಕ್ತಿಶಾಲಿಯಾಗಿ ಪ್ರೇಕ್ಷಕರನ್ನು ತಲಪುತ್ತದೆ ಎಂದರು.

ಕಮ್ಮಟದ ನಿರ್ದೇಶಕ ಉತ್ತರ ಕನ್ನಡದ ’ಚಿಂತನ’ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ, ಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ ಮಾತನಾಡಿ ರಂಗಕಲೆಯ ಪ್ರಕ್ರಿಯೆಗಳನ್ನು ಬಳಸಿಕೊಂಡರೆ ಶಿಕ್ಷಣ ಹೆಚ್ಚು ಪರಿಣಾಮಕಾರಿಯೂ, ಆನಂದದಾಯಕವೂ ಆಗುತ್ತದೆ. ಅದೇ ಕಾರಣಕ್ಕಾಗಿ ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣದಲ್ಲಿ ರಂಗಕಲೆ ಬಳಸಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ. ಅದರ ಯಶಸ್ವಿ ಪ್ರಯೋಗಗಳು ಹಲವೆಡೆ ನಡೆದಿವೆ ಎಂದರು. ಬೈಂದೂರಿನ ಹಿರಿಯ ರಂಗ ಕಲಾವಿದರು, ಶಿಕ್ಷಕರು, ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ವಂದಿಸಿದರು.

Exit mobile version