ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.30: ಸಮಯದ ಪರಿವೆಯೇ ಇಲ್ಲದೆ ಭಿನ್ನ ಲೋಕಕ್ಕೆ ಕರೆದೊಯ್ಯುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಮನುಷ್ಯನ ಸಂವೇದನೆಯಲ್ಲಿಯೇ ಸಾಹಿತ್ಯ ಅಡಗಿದೆ ಎಂದು ಕಾದಂಬರಿಕಾರ, ಶಿಕ್ಷಕ ಹೆಚ್. ಬಿ. ಇಂದ್ರಕುಮಾರ್ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ತಳಿಕಂಡಿ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಾಹಿತ್ಯ ನಮ್ಮನ್ನು ಭಿನ್ನ ನೆಲೆಗಳ ಹುಡುಕಾಟಕ್ಕೆ ಅನುವು ಮಾಡಿಕೊಡುತ್ತದೆ. ಯಾವುದೇ ಸಾಹಿತ್ಯ ರಚನೆಯಲ್ಲಿ ಭಾಷೆ ಸಮೃದ್ಧತೆ, ನಿಗೂಢತೆ ಮತ್ತು ಮನಸಿಗೆ ಹಿತವೆನಿಸುವ ವಿಸ್ಮಯಗಳ ಹೂರಣವನ್ನು ಒಳಗೊಂಡಿದ್ದರೆ ಓದುಗರನ್ನು ಹೆಚ್ಚು ಆಕರ್ಷಿಸುತ್ತದೆ ಎಂದ ಅವರು ಈ ಪ್ರಶಸ್ತಿಯು ನನ್ನ ಬರವಣಿಗೆಯ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.
ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಹೆಚ್. ಶಾಂತಾರಾಮ್ ಅವರು ಮಾತನಾಡಿ ಸಾಹಿತ್ಯ ಸೇವೆ ಮುಂದುವರಿಯಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ ಪ್ರಭು ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ ಮತ್ತು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಕುಂದಾಪುರ ತಾಲೂಕು ತಹಶೀಲ್ದಾರ್ ಶೋಭಲಕ್ಷ್ಮಿ ಎಚ್. ಎಸ್., ತಳಿಕಂಡಿ – ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶವನ್ನು ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ದೇವದಾಸ್ ಕಾಮತ್ ಮತ್ತು ರಾಜೇಂದ್ರ ತೋಳಾರ್ ಉಪಸ್ಥಿತರಿದ್ದರು.
ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕರಾದ ಡಾ. ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ. ಗೊಂಡ ವಂದಿಸಿದರು.
ಕನ್ನಡ ಉಪನ್ಯಾಸಕರಾದ ಮೈತ್ರಿ “ತಳಿಕಂಡಿ” ಪುಸ್ತಕದ ಕುರಿತು ಮಾತನಾಡಿದರು. ಆಂಗ್ಲ ಭಾಷಾ ಉಪನ್ಯಾಸಕಿ ರೋಹಿಣಿ ಹೆಚ್. ಬಿ. ಕಾರ್ಯಕ್ರಮ ನಿರೂಪಿಸಿದರು.