Kundapra.com ಕುಂದಾಪ್ರ ಡಾಟ್ ಕಾಂ

ನಿವೃತ್ತ ಸೇನಾ ಹವಾಲ್ದಾರ್ ದಿನೇಶ್ ಆಚಾರ್ಯಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.06:
ಭಾರತೀಯ ಭೂ ಸೇನೆಯಲ್ಲಿ ಹವಾಲ್ದಾರರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳಿದ ದಿನೇಶ್ ಆಚಾರ್ಯ ಅವರಿಗೆ ನಾಗರಿಕರು ಗೌರವ ಸಂಭ್ರಮದೊಂದಿಗೆ ಸ್ವಾಗತಿಸಿಕೊಂಡಿದ್ದಾರೆ.

ದಿನೇಶ್ ಆಚಾರ್ಯ ಅವರು ಹರಿಯಾಣದಲ್ಲಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ಗಾಗಿ ತರಬೇತಿ ಪಡೆದು ಜಮ್ಮು ಕಾಶ್ಮೀರ, ಉತ್ತರಾಖಂಡ ಸಹಿತ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. 2011ರಲ್ಲಿ ಕಮಾಂಡೋ ಕೋರ್ಸ್ ತರಬೇತಿಯನ್ನು ಹಿಮಾಚಲ ಪ್ರದೇಶದ ಮಸೂರಿಯಲ್ಲಿ ಪಡೆದರು. 2014ರಿಂದ ಅರುಣಾಚಲ, ಜಮ್ಮು ಕಾಶ್ಮೀರ, ಪಂಜಾಬ್ನಲ್ಲಿ ಸೇವೆ ಸಲ್ಲಿಸಿದ್ದರು. ಛತ್ತೀಸ್ ಗಢ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ನಕ್ಸಲೈಟ್ ಕಾರ್ಯಾಚರಣೆಯಲ್ಲಿ 10ಕ್ಕೂ ಅಧಿಕ ಬಾರಿ ಪಾಲ್ಗೊಂಡಿದ್ದರು. ಜಮ್ಮು ಕಾಶ್ಮೀರದ ಲಡಾಖ್ನಲ್ಲಿ ಮೈನಸ್ 35ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಆಫ್ರಿಕಾದ ಡಿ. ಆರ್. ಕಾಂಗೋದಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಭಾರತದ 135 ಮಂದಿಯ ತಂಡದೊಂದಿಗೆ ತೆರಳಿ 13ತಿಂಗಳ ಕಾಲ ಸೇವೆ ಸಲ್ಲಿಸಿದ್ದರು. ಬಹುಮಹಡಿ ಹಳೆ ಕಟ್ಟಡ ಕುಸಿದು ಬಿದ್ದ ಸಂದರ್ಭ ಶಾಂತಿ ಪಾಲನಾ ಪಡೆಯು 35 ಮಂದಿಯನ್ನು ರಕ್ಷಿಸಿತ್ತು. ಅವರಿಗೆ ಆಫ್ರಿಕಾ ಸರಕಾರ ದಿಂದ ಎರಡು ಪ್ರಶಸ್ತಿ ಕೊಟ್ಟರೆ ಭಾರತ ಸರಕಾರವೂ ಒಂದು ಪ್ರಶಸ್ತಿ ನೀಡಿತ್ತು. 21 ವರ್ಷಗಳ ಸೇವೆಯಲ್ಲಿ 17 ಗುಡ್ ಎಂಟ್ರಿ ಕ್ಯಾಶ್ ರಿವಾರ್ಡ್ಸ್, ಪೊಲೀಸ್ ಮೆಡಲ್, ಯುನೈಟೆಡ್ ನೇಶನ್ಸ್ ಮೆಡಲ್ ಪಡೆದಿದ್ದಾರೆ.

ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಕಾಳಿಕಾಂಬಾ ನಗರದ ಕೃಷಿಕ ಶಂಕರ ಆಚಾರ್ಯ, ಗೃಹಿಣಿ ಸುಶೀಲಾ ಆಚಾರ್ಯ ದಂಪತಿಯ ಪುತ್ರರಾದ ದಿನೇಶ್ ಆಲೂರು ಸರಸ್ವತಿ ಹಿ.ಪ್ರಾ. ಶಾಲೆ, ಗ್ರೆಗರಿ ಪ್ರೌಢಶಾಲೆಯಲ್ಲಿ ಫ್ರೌಢಶಿಕ್ಷಣ ಬಳಿಕ ಮಡ್ಲೆನೆಂಪು ಸರಕಾರಿ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರೈಸಿದ್ದಾರೆ.

ದಿನೇಶ್ ಆಚಾರ್ಯ ಅವರನ್ನು ಮುಳ್ಳಿಕಟ್ಟೆಯಲ್ಲಿ ಚೆಂಡೆಯೊಂದಿಗೆ ಆರತಿ ಬೆಳಗಿ ಸ್ವಾಗತಿಸಿಕೊಂಡು ತೆರೆದ ವಾಹನದಲ್ಲಿ ಆಲೂರಿಗೆ ಕರೆದೊಯ್ಯಲಾಯಿತು. ಈ ವೇಳೆ ಮುಖಂಡರಾದ ಚಂದ್ರಯ್ಯ ಆಚಾರ್ ಕಳಿ, ಆಲೂರು ಗ್ರಾಮಸ್ಥರು ಉಪಸ್ಥಿತರಿದ್ದರು. ಇದಕ್ಕೂ ಪೂರ್ವದಲ್ಲಿ ಮುಳ್ಳಿಕಟ್ಟೆ ಮತ್ತು ಹೊಸಾಡು ಗ್ರಾಮಸ್ಥರ ವತಿಯಿಂದ ಮುಳ್ಳಿಕಟ್ಟೆ ಆಟೋ ಸ್ಟ್ಯಾಂಡ್ನಲ್ಲಿ ಸನ್ಮಾನಿಸ ಈ ಸಂದರ್ಭ ಶಂಕರನಾಗ ಆಟೋ ಸ್ಟ್ಯಾಂಡ್ ಅಧ್ಯಕ್ಷ ಚಂದ್ರ ಹಕ್ಲಾಡಿ ಮತ್ತು ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಬಳಿಕ ದಿನೇಶ್ ಅವರು ವ್ಯಾಸಂಗ ಮಾಡಿದ ಆಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಟ್ಟೂರ ಸನ್ಮಾನ ನೆರವೇರಿಸಲಾಯಿತು.

Exit mobile version