Kundapra.com ಕುಂದಾಪ್ರ ಡಾಟ್ ಕಾಂ

ಬ್ರಹ್ಮಾವರ ಕೃಷಿ ಕಾಲೇಜು ರದ್ದು, ರೈತರ ಮಕ್ಕಳಿಗೆ ಎಸಗಿದ ದ್ರೋಹ: ರೈತ ಸಂಘದ ಸಭೆಯಲ್ಲಿ ಪ್ರತಾಪಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹೊಸ ಶಿಕ್ಷಣ ನೀತಿಯನ್ನು ನೆಪವಾಗಿರಿಸಿಕೊಂಡು ಬ್ರಹ್ಮಾವರದ ಕೃಷಿ ಕಾಲೇಜು ರದ್ಧುಗೊಳಿಸಿ ಕೃಷಿ ಡಿಪ್ಲೊಮಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸಿರುವುದು ರೈತರ ಮಕ್ಕಳಿಗೆ ಮಾಡಿದ ದ್ರೋಹವಾಗಿದೆ. ಕಾಲೇಜು ಪುನರಾರಂಭಕ್ಕಾಗಿ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ಹೇಳಿದರು.

ಇಲ್ಲಿನ ಆರ್.ಎನ್. ಶೆಟ್ಟಿ, ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ ತಲಾ 35 ಕೋಟಿ ವೆಚ್ಚದಲ್ಲಿ ಕೃಷಿ ಕಾಲೇಜು ಹಾಗೂ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. 2014ರಿಂದ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಸ್ಥಳೀಯ ಶಾಸಕರು ಈ ಬಗ್ಗೆ ಮಾತನಾಡುತ್ತಿಲ್ಲ. ಕಾಲೇಜು ಪುನಾರಾರಂಭ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ರಾಜ್ಯ ಕೃಷಿ ಸಚಿವರನ್ನು ಭೇಟಿಯಾಗಿ ಕಾಲೇಜನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಹಳೆಯ ಯಂತ್ರೋಪಕರಣಗಳನ್ನು ಗುಜರಿಗೆ ಮಾರಾಟ ಮಾಡಿದ ಹಗರಣ ನಡೆದಿದೆ. ಈ ಬಗ್ಗೆ ಕುರಿತು ಸಂಬಂಧಪಟ್ಟ ಇಲಾಖೆಯ ಕಾರ್ಯದಗೆ ದೂರನ್ನು ಸಲ್ಲಿಸಿದ್ದೇವೆ. ಕಾರ್ಖಾ ನೆಗೆ 115 ಕೋಟಿ ಹಣ ಬಾಕಿ ಇದ್ದರೂ, ತನಿಖೆ ನಡೆದಿಲ್ಲ. ಈ ಬಗ್ಗೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದರು.

ಸಭೆಯಲ್ಲಿ ಉಡುಪಿ ಕುಡಿಯುವ ನೀರಿನ ಯೋಜನೆಯ ರೈತರ ಭೂಮಿ ಸ್ವಾಧೀನ ಮತ್ತು ಪರಿಹಾರ ನೀಡುವಲ್ಲಿ ತಾರತಮ್ಯ, ವಾರಾಹಿ ನೀರಾವರಿ ಯೋಜನೆ, ಅಪೂರ್ಣ ಜಲಜೀವನ್ ಮಿಷನ್ ಯೋಜನೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ರೈತ ಸಂಘಟನೆಯ ಮುಖಂಡರಾದ ಕೆ. ವಿಕಾಸ್ ಹೆಗ್ಡೆ, ಮಲ್ಯಾಡಿ ಶಿವರಾಮ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬಾಬು ಶೆಟ್ಟಿ ತಗ್ಗರ್ಸೆ, ಡಾ.ಅತುಲ್ ಕುಮಾರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ವಂಡ್ಸೆ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಕೆದೂರು ಸದಾನಂದ ಶೆಟ್ಟಿ,ಮಂದಾರ್ತಿ ಕೃಷ್ಣ ಶೆಟ್ಟಿ, ಕೃಷ್ಣರಾಜ ಶೆಟ್ಟಿ, ಚೋರಾಡಿ, ಪ್ರದೀಪ್ ಕುಮಾರ್ ಶೆಟ್ಟಿ ಸೀತಾರಾಮ ಗಾಣಿಗ, ಕಾವಾಡಿ, ಶಿರಿಯಾರ, ಶರತ್ಚಂದ್ರ ಶೆಟ್ಟಿ ರೋಹಿತ್ ಕುಮಾರ್ ಶೆಟ್ಟಿ ಬ್ರಹ್ಮಾವರ, ಚೋರಾಡಿ ಮರತೂರು `ಸಂಪಿಗೇಡಿ ಸಂಜೀವ ಶೆಟ್ಟಿ, ಹಾಲಾಡಿ ಸರ್ವೋತ್ತಮ ಹೆಗ್ಡೆ, ಅಶೋಕ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಬೆಳ್ವೆ ಜಯರಾಮ ಶೆಟ್ಟಿ ಇದ್ದರು.

Exit mobile version