Kundapra.com ಕುಂದಾಪ್ರ ಡಾಟ್ ಕಾಂ

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್: 52 ಲಕ್ಷ ರೂ. ಲಾಭ, ಶೇ.13 ಡಿವಿಡೆಂಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.28:
ಜಿಲ್ಲೆಯ ಪ್ರಗತಿಶೀಲ ಸಹಕಾರಿ ಸಂಘಗಳ ಪೈಕಿ ಅಗ್ರಸ್ಥಾನದಲ್ಲಿದ್ದು, ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ 2022-23ನೇ ಸಾಲಿನಲ್ಲಿ 52 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರದಿಂದ ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಸಂಘದ ಪ್ರಧಾನ ಕಛೇರಿಯಲ್ಲಿ ಭಾನುವಾರ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2022-23ನೇ ಸಾಲಿನಲ್ಲಿ ಒಟ್ಟು ರೂ. 36.55 ಕೋಟಿ ಠೇವಣಿ ಹೊಂದಿದ್ದು, 30.82 ಕೋಟಿ ಸಾಲ ನೀಡಿದೆ. ದುಡಿಯುವ ಬಂಡವಾಳ 40 ಕೋಟಿಯಾಗಿದ್ದರೇ, 200 ಕೋಟಿಯ ವಹಿವಾಟು ನಡೆಸಿದೆ ಎಂದರು. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ ಶ್ರಮವಿದೆ ಎಂದರು.

ಪ್ರಧಾನ ಕಛೇರಿಯಲ್ಲಿ ಉತ್ತಮ ಉತ್ತಮ ಪ್ರಗತಿ ಸಾಧಿಸಿದ ಪ್ರಭಾರ ಸಿಇಓ ಕಿಟ್ಟಣ್ಣ ರೈ, ಶಾಖಾ ಪ್ರಬಂಧಕರಾದ ಕಂಬದಕೋಣೆ ಶಾಖೆಯ ರಾಜೇಂದ್ರ ದೇವಾಡಿಗ, ಗೋಳಿಹೊಳೆ ಶಾಖೆಯ ರಾಘವೇಂದ್ರ ಪೂಜಾರಿ, ನಾಗೂರು ಶಾಖೆಯ ಪ್ರಶಾಂತ್ ಹಾಗೂ ನಾವುಂದ ಶಾಖೆಯ ಶ್ರೀನಿವಾಸ ನಾವುಂದ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರುಗಳಾದ ಮಂಜು ಪೂಜಾರಿ ನಾವುಂದ, ರಾಮಕೃಷ್ಣ ಖಾರ್ವಿ, ಮಂಜುನಾಥ ಪೂಜಾರಿ, ಸೀತಾರಾಮ ಮಡಿವಾಳ ಇದ್ದರು. ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಶಾಖಾ ಪ್ರಬಂಧಕ ಶ್ರೀನಿವಾಸ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ಕೆ. ವಾರ್ಷಿಕ ವರದಿ ವಾಚಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Exit mobile version