Kundapra.com ಕುಂದಾಪ್ರ ಡಾಟ್ ಕಾಂ

ಬಿಜೆಪಿ ಮೇಲೆ ಮುನಿಸು. ಕಾಂಗ್ರೆಸ್ ಸೇರ್ಪಡೆ ಖಚಿತ ಎಂದ ಮಾಜಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಕೇಟ್ ಕೈತಪ್ಪಿದಾಗಿನಿಂದ ಬಿಜೆಪಿ ಪಕ್ಷದ ಮೇಲೆ ಮುನಿಸಿಕೊಂಡಿದ್ದ ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಇದೀಗ ಬಹಿರಂಗವಾಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿರುವುದಲ್ಲದೇ ಪಕ್ಷ ತೊರೆಯುವುದಾಗಿ ಹೇಳಿಕೊಂಡಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಇಂಗಿತ ವ್ಯಕ್ತಪಡಿಸಿದರು ಅವರು, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2013ರಿಂದ ಬೈಂದೂರು ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸಿದ್ದೆ. ಬಿಜೆಪಿ ಪಕ್ಷದಿಂದ ಶಾಸಕನಾಗಿದ್ದ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯವನ್ನು ಮಾಡಿದ್ದೇನೆ. ಆದಾಗ್ಯೂ ಬಿಜೆಪಿಯಲ್ಲಿ ಬೆಳೆಯಲು ಕೊಡಲಿಲ್ಲ. ಇದು ನನ್ನ ಮನಸಿಗೆ ನೋವಾಗಿದೆ. ಕರಾವಳಿಯಲ್ಲಿ ಸ್ವಲ್ಪ ಬಿಜೆಪಿ ಪರ ಅಲೆ ಇರಬಹುದು. ಕರ್ನಾಟಕದಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿದೆ. ನಾಲ್ಕು ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆಮಾಡಲಾಗದ ಬಿಜೆಪಿ ಇನ್ನೇನು ಮಾಡಲು ಸಾಧ್ಯ ಎಂದು ಟೀಕಿಸಿರುವ ಅವರು, ಸದ್ಯದಲ್ಲಿಯೇ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಾಗಿಯೂ ತಿಳಿಸಿದ್ದಾರೆ.

ಬೈಂದೂರು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ. ಗೋಪಾಲ ಪೂಜಾರಿ ಹಾಗೂ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾದ ಬಳಿಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

2013ರ ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡು ಕಾಂಗ್ರೆಸ್ನ ಕೆ. ಗೋಪಾಲ ಪೂಜಾರಿ ಅವರ ವಿರುದ್ಧ ಪರಾಭವಗೊಂಡಿದ್ದ ಬಿ.ಎಂ. ಸುಕುಮಾರ ಶೆಟ್ಟಿ ಅವರು ಮತ್ತೆ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರ ಮೇಲೆ ಆಗಾಗ್ಗೆ ಅಸಮಾಧಾನ ಏಳುತ್ತಿತ್ತು. 2023ರ ಚುನಾವಣೆಯಲ್ಲಿ ಸುಕುಮಾರ ಶೆಟ್ಟರಿಗೆ ಟಿಕೇಟ್ ನೀಡಬಾರದು ಎಂದು ಮೂಲ ಬಿಜೆಪಿಗರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಈ ನಡುವೆ ಪಕ್ಷದಿಂದಲೂ ಟಿಕೇಟ್ ನಿರಾಕರಿಸಿದ್ದರಿಂದ ಬಿ.ಎಂ. ಸುಕುಮಾರ ಶೆಟ್ಟಿ ಅವರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದೇ ಮೌನವಹಿಸಿದ್ದರು. ತಮ್ಮ ರಾಜಕೀಯ ಗುರು ಬಿ.ಎಸ್. ಯಡಿಯೂರಪ್ಪನವರ ಆದಿಯಾಗಿ ಯಾರ ಮಾತಿಗೂ ಜಗ್ಗದೇ ಚುನಾವಣೆಯಲ್ಲಿ ಸೈಲೆಂಟ್ ಆಗಿದ್ದರು.

ಅಲ್ಲಿಂದಲೇ ಕಾಂಗ್ರೆಸ್ ಸೇರುತ್ತಾರೆ ಎಂಬ ಸೂಚನೆಗಳು ದೊರೆತಿತ್ತಾದರೂ, ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಇತ್ತಿಚಿಗೆ ವಿಧಾನ ಪರಿಷತ್ ಸದಸ್ಯ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೊಲ್ಲೂರು ಭೇಟಿ ವೇಳೆ ಬಹಿರಂಗವಾಗಿ ಕಾಣಿಸಿಕೊಂಡ ಸುಕುಮಾರ ಶೆಟ್ಟರು ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷರನ್ನುಭೇಟಿಯಾಗಿ ತಮ್ಮ ಬಿಜೆಪಿ ಪಕ್ಷ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Exit mobile version