Kundapra.com ಕುಂದಾಪ್ರ ಡಾಟ್ ಕಾಂ

ಶರನ್ನವರಾತ್ರಿ: ಕೊಲ್ಲೂರಿನಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

ಕೊಲ್ಲೂರು,ಅ.22: ನವರಾತ್ರಿ ಹಾಗೂ ವಿಜಯದಶಮಿಯ ಪ್ರಯುಕ್ತ ಕೊಲ್ಲೂರಿಗೆ ಆಗಮಿಸಿದ ನೂರಾರು ಭಕ್ತಾದಿಗಳು ಇಂದು ಬೆಳಿಗ್ಗೆ ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಮುಂಜಾನೆ 4:30ರಿಂದಲೇ ಆರಂಭಗೊಂಡು ಮಧ್ಯಾಹ್ನದವರೆಗೆ ನಡೆದ ಅಕ್ಷರಾಭ್ಯಾಸದಲ್ಲಿ 2000ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆತ್ತವರೊಂದಿಗೆ ಪಾಲ್ಗೊಂಡಿದ್ದರು. ಇದರಲ್ಲಿ ಬಹುತೇಕ ಮಂದಿ ಕೇರಳಿಗರು. ವರ್ಷದಿಂದ ವರ್ಷಕ್ಕೆ ಈ ಅಕ್ಷರಾಭ್ಯಾಸಕ್ಕೆ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಕೊಲ್ಲೂರು ದೇವಾಲಯದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಸಾಲಾಗಿ ಹೆತ್ತವರ ತೊಡೆಯ ಮೇಲೆ ಕುಳಿತ ಎಳೆಯ ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ನಂತರ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಬರೆಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. (ಕುಂದಾಪ್ರ ಡಾಟ್ ಕಾಂ ವರದಿ)

ನವಾನ್ನಪ್ರಾಶನ: ಈ ದಿನ ಎಳೆಯ ಕಂದಮ್ಮಗಳಿಗೆ ಪ್ರಥಮ ಬಾರಿಗೆ ಅನ್ನ ತಿನ್ನಿಸುವ ಮೂಲಕ ನವಾನ್ನಪ್ರಾಶನ ಮಾಡಿಸಲಾಗುತ್ತದೆ. ಇಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ. ನವರಾತ್ರಿಯ ಸಂದರ್ಭದಲ್ಲಿ ನಡೆಯುವ ದೇವಿಯ ಸೀರೆಗಳ ಹರಾಜು ಕೂಡ ಇಲ್ಲಿನ ಇನ್ನೊಂದು ವಿಶೇಷವಾಗಿದೆ. ಕೊಲ್ಲೂರು ದೇವಿಗೆ ಸೀರೆಗಳನ್ನು ಒಪ್ಪಿಸುವ ಹರಕೆ ಬಹಳ ಪ್ರಸಿದ್ಧ. ಇಂತಹ ಸೀರೆಗಳನ್ನು ನವರಾತ್ರಿಯ ದಿನಗಳಲ್ಲಿ ಹರಾಜು ಮಾಡಲಾಗುತ್ತದೆ. ದೇವಿಗೆ ಉಡಿಸಿದ ಈ ಸೀರೆಗಳನ್ನು ಮೂಲ ಬೆಲೆಗಿಂತಲೂ ಸಾವಿರಾರು ರುಪಾಯಿ ಹೆಚ್ಚುವರಿ ಕೊಟ್ಟು ಪಡೆದುಕೊಳ್ಳುವುದಕ್ಕೆ ಭಕ್ತರಲ್ಲಿ ಸ್ಪರ್ಧೆ ಏರ್ಪಡುತ್ತದೆ. (ಕುಂದಾಪ್ರ ಡಾಟ್ ಕಾಂ ವರದಿ)

 

Exit mobile version