Kundapra.com ಕುಂದಾಪ್ರ ಡಾಟ್ ಕಾಂ

ನಾಗೂರು: ಪೆಟಲ್ಸ್ ಆರ್ಟ್ ಗ್ಯಾಲರಿ ಅನಾವರಣ, ಕಲಾ ಗಣಪ-2 ಸ್ಪರ್ಧೆಯ ಪ್ರಶಸ್ತಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮನುಷ್ಯನ ಅರ್ಧ ವ್ಯವಹಾರಗಳು ಭೌತಿಕ ಪ್ರಪಂಚದಲ್ಲಿ ನಡೆದರೆ, ಉಳಿದರ್ಧ ಸೌಂದರ್ಯೋಪಾಸನೆಗೆ ಪೂರಕವಾದ ಭಾವ ಪ್ರಪಂಚದಲ್ಲಿ ನಡೆಯಬೇಕು. ಬದುಕು ಕೇವಲ ಭೌತಿಕ ಪ್ರಪಂಚಕ್ಕೆ ಮಾತ್ರ ಸೀಮಿತವಾದರೆ ಅದು ಶುಷ್ಕವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

ನಾಗೂರಿನ ಕೆಎಎಸ್ ಆಡಿಟೋರಿಯಂನಲ್ಲಿ ನಡೆದ ಕುಸುಮ ಸಂಸ್ಥೆ ಬೆಳ್ಳಿಹಬ್ಬ ಸಂಭ್ರಮ, ನವೀಕೃತ ಪೆಟಲ್ಸ್ ಆರ್ಟ್ ಗ್ಯಾಲರಿ ಅನಾವರಣ, ಕಲಾ ಗಣಪ-2 ಸ್ಪರ್ಧೆಯ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಕುಸುಮ ೨೫ನೆ ವರ್ಷಾಚರಣೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಸೌಂದರ್ಯೋಪಾಸನೆ, ಕಲಾಸ್ವಾದನೆಯ ಮಹತ್ವವನ್ನು ಸಾರಿದ ಕವಿ ರವೀಂದ್ರರ ರೂಪಕವೊಂದನ್ನು ಉಲ್ಲೇಖಿಸಿದ ಜನಾರ್ದನ ಅವರು, ಉದ್ಯಮಿ ಎಚ್. ನಳಿನ್ಕುಮಾರ ಶೆಟ್ಟಿ 25 ವರ್ಷಗಳ ಹಿಂದೆ ಸ್ಥಾಪಿಸಿದ ತಮ್ಮ ಕುಸುಮ ಫೌಂಡೇಶನ್ ಆಶ್ರಯದಲ್ಲಿ ನಡೆಸುತ್ತ ಬಂದಿರುವ ವಿವಿಧ ಕಲಾ ತರಗತಿಗಳು ಮತ್ತು ಕಾರ್ಯಕ್ರಮಗಳು ನಾಗೂರು ಪರಿಸರವನ್ನು ಕಲಾಸಮೃದ್ಧಗೊಳಿಸಿವೆ ಎಂದು ಹೇಳಿದರು.

ಕುಂದಾಪುರ ಮಿಡ್ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷಕುಮಾರ ಶೆಟ್ಟಿ ಕಾವ್ರಾಡಿ ಅಧ್ಯಕ್ಷತೆ ವಹಿಸಿದ್ದರು.

ನವೀಕೃತ ಪೆಟಲ್ಸ್ ಆರ್ಟ್ಸ್ ಗ್ಯಾಲರಿಯನ್ನು ಅನಾವರಣಗೊಳಿಸಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಳಿನ್ಕುಮಾರ ಶೆಟ್ಟಿ ತಮ್ಮ ದುಡಿಮೆಯ ಒಂದಂಶವನ್ನು ಕಲಾ ಪ್ರಸಾರ ಮತ್ತು ಪ್ರದರ್ಶನಕ್ಕೆ ವಿನಿಯೋಗಿಸುತ್ತಿರುವುದನ್ನು, ಅವರ ಕುಸುಮ ಫೌಂಡೇಶನ್ ಆಶ್ರಯದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದನ್ನು ಶ್ಲಾಘಿಸಿದರು.

ಸ್ವಾಗತಿಸಿದ ನಳಿನ್ಕುಮಾರ ಶೆಟ್ಟಿ, ಸಂಸ್ಥೆಯ ೨೫ ವರ್ಷಗಳ ಸಾಧನೆಯನ್ನು ಮೆಲುಕುಹಾಕಿ ಬೆಳ್ಳಿಹಬ್ಬದ ನಿಮಿತ್ತ ನಡೆಸಲು ಉದ್ದೇಶಿಸಿದ ಕಾರ್ಯಕ್ರಮಗಳ ವಿವರ ನೀಡಿದರು. ಬ್ಲಾಸಂ ಆರ್ಟ್ಸ ಸ್ಕೂಲ್ನ ಚಿತ್ರಕಲಾ ಶಿಕ್ಷಕ ಯು. ಮಂಜುನಾಥ ಮಯ್ಯ ಶುಭ ಕೋರಿದರು. ಕಾರ್ಯಕ್ರಮ ನಿರೂಪಿಸಿದ ಶಿಕ್ಷಕ ವಿಶ್ವನಾಥ ಶೆಟ್ಟಿ ವಂದಿಸಿದರು.

ವಿದ್ಯಾರ್ಥಿ ಚಿತ್ರಕಲಾ ಪ್ರದರ್ಶನ, ಕಲಾ ಗಣಪತಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ, ಸಂಗೀತ, ನೃತ್ಯ ಕಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.

Exit mobile version