ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಕರಾವಳಿಯ 600 ಮಂದಿ ನೆಲೆಸಿರುವ ಬಗ್ಗೆ ಮಾಹಿತಿ ಇದ್ದು ಈ ಪೈಕಿ ಕುಂದಾಪುರ, ಬೈಂದೂರು ತಾಲೂಕುಗಳ 75 ಮಂದಿ ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಎಲ್ಲರೂ ಸುರಕ್ಷಿತರಾಗಿರುವ ಮಾಹಿತಿ ದೊರೆಯುತ್ತಿದೆ.
ಇಸ್ರೇಲ್‌ನ ಥೆಲ್ ಅವೀವ್ ನಗರ ಹಾಗೂ ಸುಮಾರು 12 ಕೀಮೀ ದೂರದಲ್ಲಿರುವ ಅರ್ಜಲಿಯಾ ಹಾಗೂ ಹಿಪಾ ಭಾಗದಲ್ಲಿ ಹೆಚ್ಚಾಗಿ ಕುಂದಾಪುರ ಬೈಂದೂರು ತಾಲೂಕಿನವರು ವಾಸವಿದ್ದು, ಜೆರುಸಲೇಮ್ ಪ್ರದೇಶದಲ್ಲಿಯೂ ಕೆಲವರು ಇರುವ ಮಾಹಿತಿ ಇದೆ. ಕರಾವಳಿ ಜಿಲ್ಲೆಯವರು ಇರುವ ಕೆಲವು ಪ್ರದೇಶ ಕಡಿಮೆ ಯುದ್ಧಪೀಡಿತವಾಗಿದ್ದು ಬಂಕರ್, ಸೇಫ್ ಹೌಸ್’ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಇಸ್ರೆಲಿನ ಅರ್ಜಲಿಯಾ ನಗರದಲ್ಲಿ ಹೌಸ್ ನರ್ಸ್ ಆಗಿರುವ ಉಪ್ಪುಂದ ಮೂಲಕ ಕ್ಲಾರೆನ್ಸ್ ಉಪ್ಪುಂದ ಅವರು ಇಸ್ರೆಲಿನ ಸದ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಸೈರನ್ ಶಬ್ದ ಮಾಡಿದ್ದು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಸಂದೇಶ ರವಾನಿಸಿಲ್ಲ. ಹಾಗೇನಾದರೂ ಅಪಾಯದ ಸಂಧರ್ಭ ಬಂದರೆ ಈಗಿರುವ ಜಾಗ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಇಸ್ರೇಲ್ ಸರ್ಕಾರ ಸೂಚನೆ ಕೊಡುತ್ತದೆ. ಅಲ್ಲದೇ ಸೈರನ್ ಆನ್ ಆಗುವುದರಿಂದ ತಕ್ಷಣ ನಾವೆಲ್ಲರೂ ಸೇಫ್ ಹೌಸ್, ಬಂಕರ್, ಸೇಪ್ ರೂಂ ಸೇರಿಕೊಳ್ಳಲು ಅವಕಾಶವಿದೆ. ಸದ್ಯಕ್ಕೆ ಅಂಥ ಯಾವುದೇ ಮುನ್ಸೂಚನೆ ಸರ್ಕಾರ ಕೊಟ್ಟಿಲ್ಲ. ನಾವೆಲ್ಲ ವಾಸಿಸುವ ಪ್ರದೇಶ ಬಾರ್ಡರಿನಿಂದ ದೂರವಿದೆ ಎಂದಿದ್ದಾರೆ.
ಅವರು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಜತೆ ಸಂಪರ್ಕದಲ್ಲಿದ್ದು, ಕರಾವಳಿಗರು ಸುರಕ್ಷಿತರಾಗಿರುವ ವಿಷಯ ಖಚಿತ ಪಡಿಸಿದ್ದಾರೆ. ಶಾಸಕರೂ ಇಸ್ರೇಲ್‌ನಲ್ಲಿ ಸಿಲುಕಿರುವ ಕರಾವಳಿಗರೊಂದಿಗೆ ಸಂರ್ಕದಲ್ಲಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಇಸ್ರೇಲ್ ದೇಶದಲ್ಲಿರುವ ಕರಾವಳಿಗರ ಕುರಿತಂತೆ ಮಾಹಿತಿ ನೀಡಿದ್ದು, ಅವರಿಬ್ಬರೂ ರಾಯಭಾರ ಕಚೇರಿಯವರ ಸಂಪರ್ಕದಲ್ಲಿ ಇದ್ದಾರೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆಂದೇ ಕರ್ನಾಟಕ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಇಸ್ರೇಲ್‌ನಲ್ಲಿರುವ ಕುಟುಂಬ ಸದಸ್ಯರು ನಿಮ್ಮ ಸಂಪರ್ಕಕ್ಕೆ ಸಿಗದಿದ್ದರೆ ಅಥವಾ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ನಿಮ್ಮವರಿಗೆ ತಕ್ಷಣದ ನೆರವಿನ ಅಗತ್ಯವಿದ್ದಲ್ಲಿ ಕೂಡಲೇ ಈ ಸಹಾಯವಾಣಿ (080 22340676, 080 22253707) ಸಂಖ್ಯೆಗಳಿಗೆ ಕರೆಮಾಡಿ, ಅಗತ್ಯ ನೆರವು ಪಡೆಯಬಹುದು ಎಂದು ಸಿಎಂ ತಿಳಿಸಿದ್ದಾರೆ.

