Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು,ಅ.15:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು. ದೇವಳದ ತಂತ್ರಿಗಳಾದ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ನವರಾತ್ರಿ ಪರ್ವಕ್ಕೆ ಚಾಲನೆ ನೀಡಿದ ಬಳಿಕ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು.

ಬಳಿಕ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾತನಾಡಿ 9 ದಿನಗಳ ಕಾಲ ನಡೆಯುವ ಉತ್ಸವಕ್ಕೆ ದೇವಳ ಸಕಲ ಸಿದ್ಧತೆ ಮಾಡಿಕೊಂಡಿದ್ದು ಊರ- ಪರವೂರಿನಿಂದ ಭಕ್ತರಿಗೋಸ್ಕರ ವಿಶೇಷ ಸೌಕರ್ಯ ಒದಗಿಸಲಾಗಿದೆ. ಚಂಡಿಕಾ ಯಾಗ, ರಥೋತ್ಸವ, ವಿದ್ಯಾರಂಭ, ನವಾನ್ನಪ್ರಾಶನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನವರಾತ್ರಿ ಸಂದರ್ಭ ನಡೆಯುತ್ತವೆ. ಪ್ರತಿದಿನ ನಡೆಯುವ ಸಾಂಸ್ಕೃತಿಕ ಉತ್ಸವವೂ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಾ ಕೆ. ರಾಮಚಂದ್ರ ಅಡಿಗ, ಜಯಾನಂದ ಹೋಬಳಿದಾರ್, ಡಾ. ಅತುಲ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ನಾಡ, ಗಣೇಶ್ ಕಿಣಿ, ಸಂಧ್ಯಾ ರಮೇಶ್, ರತ್ನ ರಮೇಶ್ ಕುಂದರ್, ಶೇಖರ ಪೂಜಾರಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಭಕ್ತವರ್ಗದವರು ಉಪಸ್ಥಿತರಿದ್ದರು.

Exit mobile version