Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಯಕ್ಷರಾತ್ರಿಯಲ್ಲಿ ಮೂವರು ಸಾಧಕರಿಗೆ ಗೌರವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಳೆದ ಎಂಟು ವರ್ಷಗಳಿಂದ ವಿಭಿನ್ನವಾಗಿ ಯಕ್ಷಗಾನ ಸಂಘಟನೆ ಮಾಡುತ್ತಿರುವ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾದ ಯಕ್ಷರಾತ್ರಿ, ಈ ಬಾರಿ ಡಿಸೆಂಬರ್ 2ರ ಶನಿವಾರ ಕುಂದಾಪುರದ ನೆಹರೂ ಮೈದಾನದಲ್ಲಿ ನಡೆಯಲಿದ್ದು ಈ ವೇಳೆ ಸಾಧಕರಿಗೆ ಗೌರವ ಪುರಸ್ಕಾರ, ಕಲಾ ಪುರಸ್ಕಾರ ನೀಡಲಾಗುತಿದೆ.

ಯಕ್ಷಕಾಶಿಯ ಮೊದಲ ಆಟ ‘ಯಕ್ಷರಾತ್ರಿ’ಯಲ್ಲಿ ಗೌರವ ಪುರಸ್ಕಾರವನ್ನು ಮುಳುಗು ತಜ್ಞ ಸಮಾಜಸೇವಕ ಈಶ್ವರ ಮಲ್ಪೆ ಹಾಗೂ ಸ್ವಾವಲಂಬಿ ಬದುಕು ನಡೆಸುವ ರಾಜ್ಯದ ಪ್ರಥಮ ಮಂಗಳಮುಖಿ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ ಅವರನ್ನು ಆಯ್ಕೆ ಮಾಡಲಾಗಿದೆ. ಯಕ್ಷರಾತ್ರಿ ಕಲಾ ಪುರಸ್ಕಾರವಾಗಿ ಬಡಗಿನ ಪ್ರಸಿದ್ದ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರು ಅವರನ್ನು ಆಯ್ಕೆಮಾಡಲಾಗಿದೆ.

ಶ್ರೀ ಪೆರ್ಡೂರು ಮೇಳದವರಿಂದ ಪ್ರೊ. ಪವನ್ ಕಿರಣಕೆರೆ ವಿರಚಿತ ಗಂಗೆ- ತುಂಗೆ-ಕಾವೇರಿ ಎನ್ನುವ ನೂತನ ಸಾಮಾಜಿಕ ಪ್ರಸಂಗವನ್ನು ಕುಂದಾಪುರದಲ್ಲಿ ಮೊಟ್ಟಮೊದಲ ಭಾರಿಗೆ ಆಯೋಜಿಸಲಾಗಿದೆ ಎಂದು ಸಂಘಟಕ ಗಜೇಂದ್ರ ಆಚಾರ್ ಕೋಣಿ ತಿಳಿಸಿದ್ದಾರೆ

ಯಕ್ಷರಾತ್ರಿ ಜೊತೆಗೆ ಸಾಧಕರಿಗೆ ಪುರಸ್ಕಾರ, ವಿದ್ಯಾರ್ಥಿ ವೇತನ, ಕಲಾವಿದರಿಗೆ ಸನ್ಮಾನ, ಅಶಕ್ತರಿಗೆ ಸಹಾಯ ಹಸ್ತ ಹೀಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ.

Exit mobile version