Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸಾರ್ವಜನಿಕ ಶ್ರೀ ಶಾರದೋತ್ಸವದ ಸುವರ್ಣ ಮಹೋತ್ಸವ. ಅ.20ರಿಂದ ‘ಬೈಂದೂರು ದಸರಾ’ಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶಾರದೋತ್ಸವ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 50ನೇ ವರ್ಷದ ಶಾರದೋತ್ಸವದ ಅಂಗವಾಗಿ ಅಕ್ಟೋಬರ್ 20ರಿಂದ ಮೊದಲ್ಗೊಂಡು 23ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದು ಬೈಂದೂರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಶ್ರೀ ಸೇನೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅಕ್ಟೋಬರ್ 20ರ ಶುಕ್ರವಾರ ಬೆಳಿಗ್ಗೆ ಶ್ರೀ ಶಾರದಾಂಬೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದ ತರುವಾಯ, ಅದ್ದೂರಿ ‘ಬೈಂದೂರು ದಸರಾ’ಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.

ಅಂದು ಧಾರ್ಮಿಕ ಕಾರ್ಯಕ್ರಮವಾಗಿ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಪೂಜೆ ಹಾಗೂ ರಾತ್ರಿ ಪೂಜೆಗಳು ನಡೆಯಲಿದೆ. ಶುಕ್ರವಾರ ಮಧ್ಯಾಹ್ನ ಬಾಲಕಿಯರಿಗೆ ಮುದ್ದು ಶಾರದೆ ಸ್ವರ್ಧೆ, ಸಾರ್ವಜನಿಕರಿಗೆ ಭಕ್ತಿಗೀತೆ ಹಾಗೂ ಮಕ್ಕಳಿಗೆ ಭಜನೆ ಹಾಡುವ ಸ್ವರ್ಧೆ ನಡೆಯಲಿದೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಾರದಾ ವೇದಿಕೆಯಲ್ಲಿ ‘ಕಲಾಮಯಂ ಉಡುಪಿ’ ತಂಡದಿಂದ ಜಾನಪದ ನೃತ್ಯ, ಸಂಗೀತ ಹಾಗೂ ವಾದ್ಯ ಪರಿಕರಗಳನ್ನೊಳಗೊಂಡ “ಜಾನಪದ ವೈಭವ” ಜರುಗಲಿದೆ.

ಅಕ್ಟೋಬರ್ 21ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಲೋಕಕಲ್ಯಾಣಾರ್ಥವಾಗಿ ಪ್ರತಿವರ್ಷದಂತೆ “ಸಾಮೂಹಿಕ ಚಂಡಿಕಾ ಯಾಗ” ನಡೆಯಲಿದೆ. ಅಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಇದ್ದು, ಆ ಬಳಿಕ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಶ್ಲೋಕ ಕಂಠಪಾಠ ಸ್ವರ್ಧೆ ಹಾಗೂ ಛದ್ಮವೇಷ ಸ್ಪರ್ಧೆಗಳು ಜರುಗಲಿದೆ. ಸಂಜೆಯ ಸಾಂಸ್ಕತಿಕ ಕಾರ್ಯಕ್ರಮವಾಗಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ವೈವಿಧ್ಯ” ಜರುಗಲಿದೆ.

ಅಕ್ಟೋಬರ್ 22ರ ರವಿವಾರ ಬೆಳಿಗ್ಗೆ ದುರ್ಗಾಹೋಮ, ಮಧ್ಯಾಹ್ನ ಮಹಿಳೆಯರಿಗೆ ಹೂಮಾಲೆ ಕಟ್ಟುವ ಸ್ವರ್ಧೆ, ರಂಗೋಲಿ ಸ್ಪರ್ಧೆಗಳು ಜರುಗಲಿದೆ. ಶಾರದೋತ್ಸವದ ಮೂರು ದಿನಗಳೂ ಸಾರ್ವಜನಿಕರಿಗೆ ‘ಕುಡಿಕೆ ಒಡೆಯುವ ಸ್ವರ್ಧೆ’ ಜರುಗಲಿದೆ. ರಾತ್ರಿ ಸರ್ವ ಸೇವಾ ಪೂಜೆ ನಡೆಯಲಿದೆ.

ರವಿವಾರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಕ್ಷಿಣೊತ್ತರ ಕನ್ನಡ ಜಿಲ್ಲೆಯ ಖ್ಯಾತ ಕಲಾವಿದರ ಸಮಾಗಮದಲ್ಲಿ “ಶಿವಸಂಭೂತ” ಹಾಗೂ ಭೂವೈಕುಂಠ” ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಬೈಂದೂರು ದಸರಾದಲ್ಲಿ ನಗರೋತ್ಸವದ ಮೆರಗು:
ಸುವರ್ಣ ಮಹೋತ್ಸವದ ಅಂಗವಾಗಿ ಅದ್ದೂರಿಯಾಗಿ ಆಚರಿಸಲಾಗುತ್ತಿರುವ ‘ಬೈಂದೂರು ದಸರಾ’ ಕಾರ್ಯಕ್ರಮದ ವಿಶೇಷ ಮೆರಗಾಗಿರುವ ನಗರತೋತ್ಸವಕ್ಕೆ; ಅಕ್ಟೋಬರ್ 23ರ ಸಂಜೆ 5 ಗಂಟೆಯಿಂದ ಚಾಲನೆ ದೊರೆಯಲಿದೆ.

ಆಕರ್ಷಕ ನಗರೋತ್ಸವದಲ್ಲಿ ವಿದ್ಯುತ್ ಅಲಂಕೃತ ದೇವರ ಭವ್ಯ ಟ್ಯಾಬ್ಲೋ, ಪೌರಾಣಿಕ ಹಿನ್ನೆಲೆಯುಳ್ಳ ವಿವಿಧ ಟ್ಯಾಬ್ಲೋಗಳು, ಜಿಲ್ಲೆಯ ಹೆಸರಾಂತ ಕಲಾವಿದರಿಂದ ಕೀಲು ಕುದುರೆ, ಮುಖವಾಡ ನೃತ್ಯ, ನವಿಲು ನೃತ್ಯ, ಮರಕಾಲು, ಕಥಕ್ಕಳಿ, ತಟ್ಟಿರಾಯ, ಚಂಡೆಯ ಮೆರಗು ಇರಲಿದೆ.

ವಿವಿಧ ತಂಡಗಳಿಂದ ಹುಲಿವೇಷ, ಕೇರಳದ ಉರಿಚಂಡೆ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ಬ್ಯಾಂಡ್ ಸೆಟ್, ಸಿಡಿಮದ್ದು ಪ್ರದರ್ಶನದ ಜೊತೆಗೆ ಸುವರ್ಣ ಸಂಭ್ರಮಕ್ಕಾಗಿ ಹಲವು ವಿಶೇಷ ಆಕರ್ಷಣೆಗಳನ್ನು ಈ ಭಾರಿ ಹಮ್ಮಿಕೊಳ್ಳಲಾಗಿದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಅಣ್ಣಪ್ಪ ಪೂಜಾರಿ ಯಡ್ತರೆ, ಬಿ. ಗೋಪಾಲ ಗಾಣಿಗ ಬಂಕೇಶ್ವರ, ಕಾರ್ಯದರ್ಶಿ ರಾಜೇಶ್ ಆಚಾರ್, ಕೋಶಾಧ್ಯಕ್ಷ ಉಮೇಶ್ ದೇವಾಡಿಗ ಹೆಗ್ಡೆಬೆಟ್ಟು, ಸಮಿತಿಯ ಮಹೇಶ್ ಆಚಾರ್, ನಿತಿನ್, ರಾಘವೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Exit mobile version