Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಹೃದಯಾಘಾತದಿಂದ ಬಾಲಕನ ಸಾವು. ಒಂದೇ ವರ್ಷದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ,ಅ.21:,
ಮನೆಯ ಸಮೀಪ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ತಲ್ಲೂರಿನಲ್ಲಿ ನಡೆದಿದೆ. ತಲ್ಲೂರಿನಲ್ಲಿ ವಾಸವಿರುವ ಅರುಣ್ ಕುಮಾರ್ ಶೆಟ್ಟಿ ಎಂಬುವರ ಪುತ್ರ, ಏಳನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ ಸಾವನ್ನಪ್ಪಿದ ಬಾಲಕ.

ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಪೃಥ್ವಿರಾಜ್ ಶೆಟ್ಟಿ ನಿನ್ನೆಯಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಇಂದು ಶಾಲೆಗೆ ತೆರಳಬೇಕಿದ್ದರಿಂದ, ಬೆಳಿಗ್ಗೆ ಶಾಲಾ ವಾಹನಕ್ಕಾಗಿ ತಾಯಿಯೊಂದಿಗೆ ಕಾಯುತ್ತಿದ್ದ ಸಂದರ್ಭ ಎದೆ ನೋವು ಕಾಣಿಸಿಕೊಂಡಿದೆ. ಬಾಲಕನನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ವಿದ್ಯಾರ್ಥಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಕೈಸೇರಬೇಕಿದೆ.

ಕಳೆದ ವರ್ಷ ಅ.27ರಂದು ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪ್ರಥ್ವಿರಾಜ ಶೆಟ್ಟಿಯ ಸಹೋದರಿ ಅನುಶ್ರೀ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಕುಂದಾಪುರದ ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮತ್ತು ಶಿಕ್ಷಕಿ ಭಾರತಿ ದಂಪತಿಗಳು ತಮಗಿದ್ದ ಇಬ್ಬರು ಮಕ್ಕಳನ್ನೂ ಕಳೆದುಕೊಂಡು ದುಃಖತಪ್ತರಾಗಿದ್ದಾರೆ.

Exit mobile version