Kundapra.com ಕುಂದಾಪ್ರ ಡಾಟ್ ಕಾಂ

ವಿಜಯದಶಮಿ: ಕೊಲ್ಲೂರಿನಲ್ಲಿ ಮಕ್ಕಳಿಗೆ ವಿದ್ಯಾರಂಭ, ನವಾನ್ನಪ್ರಾಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ನವರಾತ್ರಿ ಪರ್ವಕಾಲ ವಿಜಯದಶಮಿಯಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ತೆರಳಿದ ನೂರಾರು ಭಕ್ತರು ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಪ್ರಾಥಃಕಾಲದಿಂದಲೇ ಅಕ್ಷರಾಭಾಸ ಮಾಡಿಸಲಾಯಿತು.

ದೇಗುಲದಲ್ಲಿ ಹೆತ್ತವರು ಕಾಲಿನ ಮೇಲೆ ಮಕ್ಕಳನ್ನು ಕುರಿಸಿಕೊಂಡು ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ಬಳಿಕ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಎಂದು ಬರೆಯಿಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.

► ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಹಾನವರಾತ್ರಿ ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತ ಸಮೂಹ – https://kundapraa.com/?p=69717 .

ನವಾನ್ನಪ್ರಾಶನ: ಎಳೆಯ ಕಂದಮ್ಮಗಳಿಗೆ ನವಾನ್ನಪ್ರಾಶನದ ಮೂಲಕ ಮೊದಲ ಭಾರಿಗೆ ಅನ್ನವನ್ನು ತಿನ್ನಿಸಲಾಗುತ್ತದೆ. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ.

ಈ ಬಾರಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾರಂಭ ಮಾಡಲಾಯಿತು. ದೇವಳದ ಆಡಳಿತ ಮಂಡಳಿ ಹಾಗೂ ಅರ್ಚಕವೃಂದ ಭಕ್ತಾದಿಗಳ ಅನುಕೂಲಕ್ಕಾಗಿ ಉತ್ತಮ ಸೂಕ್ತ ವ್ಯವಸ್ಥೆ ಮಾಡಿದ್ದರು./ ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version