Kundapra.com ಕುಂದಾಪ್ರ ಡಾಟ್ ಕಾಂ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ ಅಕ್ರಮ ಆರೋಪ: ಡಿ.12ರೊಳಗೆ ವರದಿ ಸಲ್ಲಿಸಲು ಪೊಲೀಸರಿಗೆ ಆದೇಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿದ್ದ ಗುಜರಿ ಮಾರಾಟದಲ್ಲಿ 14 ಕೋಟಿ ರೂ. ಹೆಚ್ಚು ಅಕ್ರಮ ನಡೆದಿದೆ. ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಬೇಕೆಂದು ಉಡುಪಿ ಜಿಲ್ಲಾ ರೈತ ಸಂಘ ಸಲ್ಲಿಸಿದ್ದ ದೂರನ್ನು ಹೆಚ್ಚುವರಿ ಸಿವಿಲ್ ನ್ಯಾಯಾಲಯ ದಾಖಲು ಮಾಡಿಕೊಂಡಿದೆ.

ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಡಿಸೆಂಬರ್ 12ರೊಗಳಗೆ ವರದಿ ಸಲ್ಲಿಸುವಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋರ್ಟ್ ನ್ಯಾಯಾಧೀಶರು ಆದೇಶಿಸಿದ್ದಾರೆ.

ಗುಜರಿ ಮಾರಾಟದಲ್ಲಿನ ಭ್ರಷ್ಟಾಚಾರವನ್ನು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಇತ್ತೀಚೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಕಾರ್ಖಾನೆಯ ಆಡಳಿತ ಮಂಡಳಿ ಗುಜರಿ ಸರಕುಗಳನ್ನು 21 ಕೋಟಿ ರೂಪಾಯಿಗೆ ಮಾರಿ, ಅದರಲ್ಲಿ 14 ಕೋಟಿಗಿಂತಲೂ ಹೆಚ್ಚು ಹಣವನ್ನು ಸರ್ಕಾರ ಮತ್ತು ರೈತರಿಗೆ ವಂಚನೆ ಮಾಡಿದೆ. ಇದರಲ್ಲಿ ಬಿಜೆಪಿಯ ಕೈವಾಡವೂ ಇದೆ ಎಂದು ಆರೋಪಿಸಿತ್ತು.

ಗುಜರಿ ಮಾರಾಟದ ಪ್ರಕ್ರಿಯೆಯನ್ನು ಶಾಸನಬದ್ಧವಾಗಿ ಇ-ಪ್ರಾಕ್ಯುರ್ಮೆಂಟ್ ಟೆಂಡರ್ ಮುಖೇನ ಮಾಡಬೇಕಿತ್ತು. ಅಥವಾ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಸೆಂಟ್ರಲ್ ಸ್ಕ್ಯಾಪ್ ಬೋರ್ಡ್ ಮುಖಾಂತರ ವಿಲೇವಾರಿ ಮಾಡಬೇಕಾಗಿತ್ತು. ಆದರೆ, ಆಡಳಿತ ಮಂಡಳಿಯವರು ಕಾನೂನುಗಳನ್ನು ಗಾಳಿಗೆ ತೂರಿ, ಸಂಬಂಧಪಟ್ಟ ಇಲಾಖೆಯ ಅನುಮೋಧನೆ ಪಡೆಯದೇ 4 ಜನರ ತಾಂತ್ರಿಕ ಸಮಿತಿಯನ್ನು ರಚಿಸಿಕೊಂಡು ಅವರಿಗೆ ಬೇಕಾದಂತೆ ಟೆಂಡರ್ ಕರೆದಿದ್ದಾರೆ. ಟೆಂಡರ್ನಲ್ಲಿ ಅತಿಹೆಚ್ಚು ಬಿಡ್ ದರ ನಮೂದಿಸಿದ ನ್ಯೂ ರಾಯಲ್ ಟ್ರೇಡರ್ಸ್ ಅವರಿಗೆ ಅನುಕೂಲವಾಗುವಂತೆ ಮತ್ತು ಸಕ್ಕರೆ ಕಾರ್ಖಾನೆಗೆ ವಂಚನೆ ಮಾಡಲು ಪೂರ್ವ ನಿಯೋಜಿತವಾಗಿ ಗುಜರಿಯ ಅಂದಾಜು ಮೌಲ್ಯವನ್ನು ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿದೆ.

ಟೆಂಡರ್ ಕಂಡೀಷನ್ ಪ್ರಕಾರ ಅತೀ ಹೆಚ್ಚು ಬಿಡ್ ಸಲ್ಲಿಸಿದ ಗುತ್ತಿಗೆದಾರ ಮೆ. ನ್ಯೂ ರಾಯಲ್ ಟ್ರೇಡರ್ಸ್ ರವರು ಗುಜರಿ ಎತ್ತುವಳಿ ಪ್ರಾರಂಭ ಮಾಡುವ ಮೊದಲು ಮುಂಗಡ ಠೇವಣಿಯಾಗಿ 5 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರೆಂಟಿಯನ್ನು ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದು ಕಾರ್ಖಾನೆಗೆ ಸಲ್ಲಿಸಬೇಕಾಗಿತ್ತು. ಆದರೆ, ಆಡಳಿತ ಮಂಡಳಿಯವರು ಹಾಗೂ ತಾಂತ್ರಿಕ ಸಮಿತಿಯವರು ಜಂಟಿಯಾಗಿ ಟೆಂಡರ್ ಕಂಡೀಷನ್ಗೆ ವಿರುದ್ಧವಾಗಿ ಟೆಂಡರ್ ಪಡೆದ ಗುತ್ತಿಗೆದಾರರಿಗೆ 5 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರಂಟಿಯನ್ನು ಕೈ ಬಿಡಲಾಗಿರುವುದು ಮಹಾ ವಂಚನೆಯ ಮುಂದುವರಿದ ಭಾಗವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Exit mobile version