Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ: ಸಾಧಕರು, ಸಂಘ ಸಂಸ್ಥೆಗಳಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಅಜ್ಜರಕಾಡಿ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡ ನುಡಿಯನ್ನು ಕಟ್ಟುವ ಹಾಗೂ ಉಳಿಸಿ ಬೆಳೆಸುವ ಕಾಯಕದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾದುದು. ಜಿಲ್ಲೆಯಲ್ಲಿ ಕನ್ನಡದೊಂದಿಗೆ ತುಳು, ಕೊಂಕಣಿ, ಬ್ಯಾರಿ ಮೊದಲಾದ ಭಾಷೆಗಳಿವೆ. ಆದರೆ ಇವೆಲ್ಲವೂ ಬೇರೆ ಎಂದು ಭಾವಿಸಬೇಕಿಲ್ಲ. ಎಲ್ಲರೂ ಕನ್ನಡಿಗರೇ ಆಗಿದ್ದಾರೆ ಎಂದರು.

ಪ್ರಾಕೃತಿಕ ಏರುಪೇರುವಿನಿಂದಾಗಿ ಈ ಭಾರಿ ವಾಡಿಕೆ ಮಳೆ ಬಾರದೇ ಇರುವುದರಿಂದ ರಾಜ್ಯದ 220 ತಾಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿಯೂ ಶೇ.25ರಷ್ಟು ಮಳೆ ಕೊರೆಯಾಗಿದೆ. ಇದರಿಂದ ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಹಾಗೂ ಬ್ರಹ್ಮಾವರ ತಾಲೂಕನ್ನು ಸಾಧಾರಣ ಬರಪೀಡಿತ ಎಂದು ಘೋಷಿಸಲಾಗಿದೆ. ಬೆಳೆ ಹಾನಿ ಅಂದಾಜಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು ಪಶ್ಚಿಮವಾಹಿನಿ ಯೋಜನೆಯಡಿ ಜಿಲ್ಲೆಯಲ್ಲಿ 450 ಕೋಟಿ ರೂ ವೆಚ್ಚದಲ್ಲಿ 56 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ 29 ಮಂದಿ ಸಾಧಕರು ಹಾಗೂ 5 ಸಂಘ ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಸಿಇಓ ಪ್ರಸನ್, ಎಸ್ಪಿ ಡಾ. ಅರುಣ್ ಕೆ, ಎಡಿಸಿ ಮಮತಾದೇವಿ, ಎಎಸ್ಪಿ ಸಿದ್ಧಲಿಂಗಪ್ಪ, ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

Exit mobile version