Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ದಲಿತ ಕುಟುಂಬದ ಮನೆ ಅಡಿಪಾಯದ ತನಕ ಮಣ್ಣು ಅಗೆದು ಕೆಡವಲು ಯತ್ನ, ಸಂಘಟನೆಗಳ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಶಿರೂರು ಮೇಲ್ಪoಕ್ತಿ ಅಂಬೇಡ್ಕರ್ ಕಾಲೋನಿಯ ದಲಿತ ಮಹಿಳೆ ಕುಟುಂಬ ವಾಸವಿರುವ ಮನೆಯ ಬುಡದ ತನಕ ಮಣ್ಣು ಅಗೆದು ಮನೆಯ ಅಡಿಪಾಯವೇ ಕುಸಿಯುವ ಭೀತಿ ಎದುರಾಗಿದೆ. ಮನೆ ಅಪಾಯಕ್ಕೆ ಸಿಲುಕುವ ಅರಿವಿದ್ದರೂ ಪಕ್ಕದಲ್ಲಿಯೇ ಸುಮಾರು 10 ಅಡಿ ತನಕ ಮಣ್ಣು ತೆಗೆದಿರುವುದನ್ನು ದಲಿತ ಸಂಘಟನೆಗಳು ಖಂಡಿಸಿವೆ.

ಅಂಬೇಡ್ಕರ್ ಕಾಲೋನಿ ನಿವಾಸಿ ಮಂಗಳ ಎಂಬುವವರ ಪೂರ್ವಿಕರು ಅಂದಾಜು 5 ದಶಕಗಳಿಂದ ವಾಸವಿದ್ದ ಜಾಗದ ಪಕ್ಕದಲ್ಲಿಯೇ 20 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡು ವಾಸಮಾಡಿಕೊಂಡಿದ್ದರು. ಈ ಜಾಗಕ್ಕಾಗಿ 94c ಹಕ್ಕು ಪತ್ರದ ಅರ್ಜಿ ಸಲ್ಲಿಸಿದ್ದರು. ಆದರೆ ಸ್ಥಳೀಯ ನಿವಾಸಿ, ಪಕ್ಕದ ಜಾಗದ ರಾಮನಾಥ ಭಟ್ ಎಂಬುವವರು ಏಕಾಏಕಿ ಮನೆಯ ನೆಲಗಟ್ಟಿನ ತನಕವೂ ವರೆಗೂ ಮಣ್ಣನ್ನು ಅಗೆಸಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯವೆಂದು ಕುಟುಂಬಿಕರು ಆರೋಪಿಸಿದ್ದಾರೆ. ಮನೆ ಅಡಿಪಾಯದ ತನಕ ಮಣ್ಣು ತೆಗೆದಿರುವುದನ್ನು ಗಮನಿಸಿದ ಸ್ಥಳೀಯರು ಮಂಗಳ ಅವರಿಗೆ ವಿಷಯ ಮುಟ್ಟಿಸಿ ಅವರು ಮನೆಗೆ ಬರುವಷ್ಟರಲ್ಲಿ ಮನೆಯ ಸಮೀಪದವರೆಗೂ ಮಣ್ಣನ್ನು ಕೊರೆದಿದ್ದು ಮನೆ ಕುಸಿಯುವ ಆತಂಕ ಎದುರಾಗಿದೆ.

ಘಟನಾ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶೋಭಾಲಕ್ಷ್ಮಿಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಡುವ ಭರವಸೆ ನೀಡಿದ್ದಾರೆ. ಆದರೆ ಭಾನುವಾರ ಮಳೆ ಸುರಿದಿದ್ದರಿಂದ ಮನೆ ಬಿಳುವ ಆತಂಕದಿಂದ ದಲಿತ ಸಂಘಟನೆಗಳು ಮತ್ತೆ ಇಲಾಖೆಯ ಗಮನಕ್ಕೆ ತಂದಿದ್ದು, ಕುಟುಂಬವನ್ನು ತಾತ್ಕಾಲಿಕವಾಗಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ವಾಸವಿದ್ದ ಮನೆ ಅಪಾಯದಲ್ಲಿರುವುದರಿಂದ ದಲಿತ ಕುಟುಂಬಕ್ಕೆ ಸೂಕ್ತ ನೆಲೆ ಒದಗಿಸಿಕೊಂಡುವಂತೆ ಸರಕಾರವನ್ನು ಮನವಿ ಮಾಡಿಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆಗಳು ಆಗ್ರಹಿಸಿವೆ.

Exit mobile version